'ಎಲೆಕ್ಟ್ರಾನಿಕ್ ವಿಕ್ಟರಿ ಮೆಷಿನ್'ನಿಂದ ಗೆದ್ದ ಕಾಂಗ್ರೆಸ್: ನಖ್ವಿ
ನವದೆಹಲಿ, ಗುರುವಾರ, 22 ಅಕ್ಟೋಬರ್ 2009( 13:00 IST )
ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೆಗೆ ಏರಲು ಸಿದ್ಧತೆ ನಡೆಸುತ್ತಿರುವ ನಡುವೆ, ಭಾರತದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ವಿರುದ್ಧ ಚುನಾವಣೆ ಅಕ್ರಮ ನಡೆಸಿದ ಗಂಭೀರ ಆರೋಪವನ್ನು ಬಿಜೆಪಿ ಮಾಡಿದೆ.
ಎಲೆಕ್ಟ್ರಾನಿಕ್ ಮತಯಂತ್ರ ಇವಿಎಂಗಳು ಕಾಂಗ್ರೆಸ್ ಪಾಲಿಗೆ 'ಎಲೆಕ್ಟ್ರಾನಿಕ್ ವಿಕ್ಟರಿ ಮೆಷಿನ್'ಗಳಾಗಿ ಪರಿವರ್ತನೆಯಾಗಿದೆಯೆಂದು ಪಕ್ಷದ ಮುಖ್ಯಕಚೇರಿಯಿಂದ ವರದಿಗಾರರ ಜತೆ ಮಾತನಾಡುತ್ತಾ ಬಿಜೆಪಿ ಉಪಾಧ್ಯಕ್ಷ ಮುಖ್ತರ್ ಅಬ್ಬಾಸ್ ನಖ್ವಿ ಆರೋಪಿಸಿದ್ದಾರೆ. ಮಹಾರಾಷ್ಟ್ರ ಮತ್ತು ಹರ್ಯಾಣದ ಅನೇಕ ಕ್ಷೇತ್ರಗಳಲ್ಲಿ ಕೇವಲ ಒಂದು ಗಂಟೆಯಲ್ಲಿ ನೂರಾರು ಮತಗಳು ಚಲಾವಣೆಯಾದ ಬಗ್ಗೆ ತಮಗೆ ವರದಿಗಳು ಬಂದಿವೆಯೆಂದು ಅವರು ಹೇಳಿದರು.
ಏಕೈಕ ಮತಯಂತ್ರದಲ್ಲಿ ಒಂದು ಗಳಿಗೆಯಲ್ಲೇ ಅನೇಕ ಮತಗಳನ್ನು ಅಕ್ರಮವಾಗಿ ಚಲಾಯಿಸಲಾಗಿದೆಯೆಂದು ಇದರ ಅರ್ಥವೆಂದು ಅವರು ವಿಶ್ಲೇಷಿಸಿದರು.ಇವಿಎಂಗಳ ಕಾರ್ಯನಿರ್ವಹಣೆ ಬಗ್ಗೆ ಅನೇಕ ಪಕ್ಷಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರೂ, ಚುನಾವಣೆಗಳನ್ನು ಇವಿಎಂಗಳ ಮೂಲಕ ನಡೆಸಲಾಯಿತೆಂದು ಅವರು ಟೀಕಿಸಿದರು.
ಇವಿಎಂನಲ್ಲಿ ಅಕ್ರಮ ಕುರಿತ ಬಿಜೆಪಿ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸೋಲನುಭವಿಸಿದ ಹಿನ್ನೆಲೆಯಲ್ಲಿ ಬಿಜೆಪಿಗೆ ದೂರಲು ಬೇರೇನೂ ಸಿಗಲಿಲ್ಲವೆಂದು ಕಟಕಿಯಾಡಿದೆ.