ಸತತವಾಗಿ ತಮ್ಮ ಪಕ್ಷವು ಮೂರನೇ ಬಾರಿ ಸೋಲಪ್ಪಿದ್ದರಿಂದ ಶಿವಸೇನೆ ಮುಖಂಡ ಬಾಳ ಠಾಕ್ರೆ ದಿಗ್ಮೂಢರಾಗಿದ್ದು, ಕಾಂಗ್ರೆಸ್-ಎನ್‌ಸಿಪಿ ಮಿತ್ರಕೂಟವನ್ನು ಜನರು ಮತ್ತೆ ಅಧಿಕಾರದ ಗದ್ದುಗೆಗೆ ಆಯ್ಕೆ ಮಾಡುವ ಮೂಲಕ ರಾಜ್ಯವನ್ನು ಪುನಃ ನರಕಕ್ಕೆ ದೂಡಿದ್ದಾರೆಂದು ಟೀಕಿಸಿದರು. 2009ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ನಾಮಾವಶೇಷಗೊಂಡ ಬಳಿಕ ತೀವ್ರ ಆಘಾತ ಮತ್ತು ಹತಾಶೆಯನ್ನು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಅವರು ವ್ಯಕ್ತಪಡಿಸಿದ್ದಾರೆ.
ಜನತಾಂತ್ರಿಕ ರಂಗ ಸರ್ಕಾರಕ್ಕೆ ಜನತೆ ಮತ ಹಾಕಲು 10 ವರ್ಷಗಳ ಅವಧಿಯಲ್ಲಿ ಅವರು ಮಾಡಿದ ಸಾಧನೆಗಳೇನೆಂದು ಠಾಕ್ರೆ ಪ್ರಶ್ನಿಸಿದ್ದಾರೆ. ಭ್ರಷ್ಟಾಚಾರ, ವಿದ್ಯುತ್ ಕಡಿತ, ಪೊಲೀಸರನ್ನು ಹತ್ಯೆ ಮಾಡಿದ ಮಾವೋವಾದಿಗಳ ಭಯೋತ್ಪಾದನೆ, ಸಾವಿರಾರು ರೈತರ ಆತ್ಮಹತ್ಯೆಗಳು, ಮುಂಬೈ ಭಯೋತ್ಪಾದನೆ ದಾಳಿಗಳು ಇವೇ ಸರ್ಕಾರದ ಕೊಡುಗೆಗಳು ಎಂದು ಠಾಕ್ರೆ ತಮ್ಮ ಸಂಪಾದಕೀಯದಲ್ಲಿ ಟೀಕಿಸಿದರು. ಶಿವಸೇನೆ-ಬಿಜೆಪಿ ಮೈತ್ರಿಕೂಟವನ್ನು ಸೋಲಿಸಿ ನಾಲಾಯಕ್ ಸರ್ಕಾರವನ್ನು ತಂದ ಜನರನ್ನು ಟೀಕಿಸಿದ ಠಾಕ್ರೆ, ಇತ್ತೀಚಿನ ಚುನಾವಣೆಯನ್ನು ಸತ್ಯಕ್ಕೆ ಜಯಸಿಕ್ಕಿದ ಮಹಾಭಾರತಕ್ಕೆ ಹೋಲಿಸಿ, ಏಕೈಕ ವ್ಯತ್ಯಾಸವೇನೆಂದರೆ, ಚುನಾವಣೆ ಮಹಾಭಾರತದಲ್ಲಿ ಕೌರವರು ವಿಜಯಶಾಲಿಗಳಾದರೆಂದು ಠಾಕ್ರೆ ಬರೆದರು.
ಜನರು ಸತತವಾಗಿ ಮೂರನೇ ಬಾರಿಯೂ ನರಕಾಸುರನನ್ನೇ ಆಯ್ಕೆ ಮಾಡಿದರೆ ನಾವೇನು ಹೇಳಲು ಸಾಧ್ಯವೆಂದು ಅವರು ಪ್ರಶ್ನಿಸಿದರು.ಅಧಿಕಾರ ಕೈವಶಕ್ಕೆ ಮರಾಠಿ ಮತಗಳನ್ನು ಒಡೆದರೆಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರವಾಹ ಹರಿಸಿದ ಅವರು, ಒಡೆದು ಆಳುವ ಹಳೆಯ ಬ್ರಿಟಿಷ್ ನೀತಿಯನ್ನು ಅಳವಡಿಸಿಕೊಂಡರೆಂದು ಟೀಕಿಸಿದರು.