ಟಿಬೆಟ್ ಧರ್ಮಗುರು ದಲೈಲಾಮಾ ಅವರು ನವೆಂಬರ್‌ನಲ್ಲಿ ಅರುಣಾಚಲ ಭೇಟಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿರುವ ನಡುವೆ, ಶುಕ್ರವಾರ ಅರುಣಾಚಲದ ಇಟಾನಗರ್ ಬೀದಿಗಳಲ್ಲಿ ಅಪರೂಪದ ಚೀನಾ ವಿರೋಧಿ ಪ್ರತಿಭಟನೆಗಳು ಮೊಳಗಿದವು.
ದಲೈಲಾಮಾ ಅವರು ರಾಜ್ಯದ ಟವಾಂಗ್ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಲು ಕಳೆದ ಮಾರ್ಚ್‌ನಲ್ಲಿ ನಿರ್ಧರಿಸಿದ್ದರೂ, ಕೊನೆ ಕ್ಷಣದಲ್ಲಿ ರದ್ದುಮಾಡಲಾಯಿತು. ದಲೈಲಾಮಾ ಬರುವ ನವೆಂಬರ್‌ನಲ್ಲಿ ಉದ್ದೇಶಿತ ಅರುಣಾಚಲ ಭೇಟಿಗೆ ಕೂಡ ಚೀನಾ ಧ್ವನಿ ಎತ್ತಿದ್ದು, ದಲೈಲಾಮಾ ಅವರ ಈ ಭೇಟಿಯೂ ರದ್ದಾಗುವುದೆಂಬ ಶಂಕೆ ಆವರಿಸಿದೆ.
ಟಿಬೆಟ್ ಸ್ವಾತಂತ್ರ್ಯ ಹೋರಾಟಕ್ಕೆ 50 ವರ್ಷಗಳು ಕಳೆದ ಸಂದರ್ಭದಲ್ಲೇ ದಲೈಲಾಮಾ ಟವಾಂಗ್‌ಗೆ ಭೇಟಿ ನೀಡುತ್ತಿರುವುದು ಚೀನಾಗೆ ಇರಿಸುಮುರಿಸು ಉಂಟುಮಾಡಿದೆ.
ಆದರೆ ದಲೈಲಾಮಾ ಭೇಟಿಗೆ ಬೆಂಬಲವಾಗಿ ಅರುಣಾಚಲ ಮುಖ್ಯಮಂತ್ರಿ ದೋರ್ಜಿ ಖಾಂಡು ಮಾತನಾಡಿದ್ದಾರೆ. ತಮ್ಮ ಪಕ್ಷವನ್ನು ಭರ್ಜರಿ ಜಯದತ್ತ ಮುನ್ನಡೆಸಿದ ಕೆಲವೇ ಗಂಟೆಗಳ ಬಳಿಕ ಚೀನಾದ ಒತ್ತಡಕ್ಕೆ ಮಣಿಯಬಾರದೆಂದು ಕೇಂದ್ರಸರ್ಕಾರಕ್ಕೆ ಕಿವಿಮಾತು ಹೇಳಿದರು. ದಲೈಲಾಮಾ ಎಲ್ಲಿಗೆ ಬೇಕಾದರೂ ಹೋಗಬಹುದೆಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಚೀನಾ ವಾದವೂ ಅರ್ಥಹೀನವಾಗಿದ್ದು, ಅದನ್ನು ಕಡೆಗಣಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಚೀನಾ ಕುರಿತು ಹೆದರದೇ, ಒತ್ತಡಕ್ಕೆ ಮಣಿಯದೇ ದೃಢ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಅವರು ಕೋರಿದ್ದಾರೆ.