ಹಿಂಸಾಚಾರದ ಮೂಲಕ ತಲ್ಲಣ ಉಂಟುಮಾಡಿದ ಮಾವೋವಾದಿಗಳು ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಬಹುಶಃ ನೇಪಾಳದಿಂದ ಶಸ್ತ್ರಾಸ್ತ್ರಗಳನ್ನು ಸಂಪಾದಿಸುತ್ತಿದ್ದಾರೆಂದು ಗೃಹ ಸಚಿವ ಪಿ.ಚಿದಂಬರಂ ಪ್ರತಿಪಾದಿಸಿದ್ದಾರೆ. ನಕ್ಸಲರು ಹಿಂಸಾಚಾರ ತ್ಯಜಿಸಿದರೆ ಅವರ ಜತೆ ಮಾತುಕತೆಗೆ ಸರ್ಕಾರದ ಇಚ್ಛೆಯನ್ನು ಚಿದಂಬರಂ ವ್ಯಕ್ತಪಡಿಸಿದರು.
ನಕ್ಸಲ್‌ವಾದವು ಭಾರತಕ್ಕೆ ಅತೀ ದೊಡ್ಡ ಆಂತರಿಕ ಭದ್ರತಾಬೆದರಿಕೆಯಾಗಿ ಉಳಿದಿದೆಯೆಂದು ಪ್ರತಿಪಾದಿಸಿದ ಅವರು, ನಕ್ಸಲೀಯರನ್ನು ವೈಭವೀಕರಿಸುವ ಬುದ್ದಿಜೀವಿಗಳನ್ನು ತರಾಟೆಗೆ ತೆಗೆದುಕೊಂಡರು. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಚಿದಂಬರಂ, ನಕ್ಸಲರು ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಿಲ್ಲವೆಂದು ಅರ್ಥಮಾಡಿಕೊಳ್ಳುವಷ್ಟು ಸರ್ಕಾರ ವ್ಯಾವಹಾರಿಕವಾಗಿದೆಯೆಂದು ಹೇಳಿದರು. ಮಾವೋವಾದಿಗಳಿಗೆ ವಿದೇಶದಿಂದ ಹಣ ಹರಿದುಬರುತ್ತಿರುವುದಕ್ಕೆ ಸಾಕ್ಷ್ಯ ಸಿಕ್ಕಿಲ್ಲ. ಆದರೆ ಮ್ಯಾನ್ಮಾರ್ ಅಥವಾ ಬಾಂಗ್ಲಾದೇಶದಿಂದ ಕಳ್ಳಸಾಗಣೆ ಆಗುವ ಶಸ್ತ್ರಾಸ್ತ್ರಗಳು ನಕ್ಸಲರ ಕೈಸೇರುತ್ತಿರುವುದಕ್ಕೆ ಖಂಡಿತವಾಗಿ ಸಾಕ್ಷ್ಯವಿದೆಯೆಂದು ಚಿದಂಬರಂ ಹೇಳಿದರು.
ನೇಪಾಳದಿಂದ ಶಸ್ತ್ರಾಸ್ತ್ರಗಳು ಬರುತ್ತಿವೆಯೇ ಎಂಬ ಪ್ರಶ್ನೆಗೆ ಅದೂ ಸಾಧ್ಯವೆಂದು ಹೇಳಿದರು. ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ಪಾಕಿಸ್ತಾನದ ಪಾತ್ರವಿದೆಯೇ ಎಂಬ ಪ್ರಶ್ನೆಗೆ ಶಸ್ತ್ರಾಸ್ತ್ರಗಳು ಯಾವ ಮೂಲದಿಂದ ಬರುತ್ತಿವೆಯೆಂದು ತಮಗೆ ಖಚಿತಪಟ್ಟಿಲ್ಲವೆಂದು ಹೇಳಿದರು.ಆಂತರಿಕ ಮೂಲಗಳಿಂದ ಭದ್ರತಾಬೆದರಿಕೆಗೆ ಸಂಬಂಧಿಸಿದಂತೆ ನಕ್ಸಲ್‌ವಾದವು ದೊಡ್ಡ ಬೆದರಿಕೆಯಾಗಿ ಉಳಿದಿದೆಯೆಂದು ಹೇಳಿದರು.
ಮಾವೋವಾದಿಗಳು ನಮ್ಮ ಶಸ್ತ್ರಾಸ್ತ್ರ ಕೋಠಿಯನ್ನೇ ಲೂಟಿ ಮಾಡಿದರು. ಸಾಂಕ್ರೈಲ್ ಪೊಲೀಸ್ ಠಾಣೆಯ ಮೇಲೆ ದಾಳಿಯ ಉದ್ದೇಶವು ಶಸ್ತ್ರಾಸ್ತ್ರ ಮತ್ತು ಹಣ ಲೂಟಿ ಮಾಡುವುದಾಗಿತ್ತು ಎಂದು ಹೇಳಿದ ಅವರು, ಈ ಹೇಳಿಕೆ ಬಳಿಕವೂ ಜನರು ನಕ್ಸಲೀಯರನ್ನು ವೈಭವೀಕರಿಸಿದರೆ, ದೇವರೇ ಅವರನ್ನು ಕಾಪಾಡಬೇಕು ಎಂದು ಚಿದಂಬರಂ ಪ್ರತಿಕ್ರಿಯಿಸಿದರು.