ಮೂಢ ನಂಬಿಕೆಯಿಂದಾಗಿ ತನ್ನ 10 ವರ್ಷ ಪ್ರಾಯದ ಮೊಮ್ಮಗಳನ್ನೇ ಕೊಲೆ ಮಾಡಿದ ವ್ಯಕ್ತಿಯೊಬ್ಬನಿಗೆ ಒರಿಸ್ಸಾ ನ್ಯಾಯಾಲಯವೊಂದು ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ.
ಆಕೆಯ ಸಾವಿನಿಂದ ತನ್ನ ಜಮೀನಿನಲ್ಲಿ ಸಮೃದ್ಧ ಫಸಲು ಬರಬಹುದೆಂಬ ನಂಬಿಕೆಯಿಂದ ಆರೋಪಿ ರಾಜೇಶ್ ಹೇಂಬ್ರಮ್ ಎಂಬಾತ ಈ ಕೃತ್ಯ ಎಸಗಿದ್ದ. ಸಂಭಾಲ್ಪುರ ಜಿಲ್ಲೆಯ ಕುಚಿಂಡ ಎಂಬಲ್ಲಿನ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯವು ಈ ತೀರ್ಪು ನೀಡಿದೆ.
53ರ ಹೇಂಬ್ರಮ್, ತನ್ನ ಮೊಮ್ಮಗಳಾದ ಬರ್ನಾಕಾ ಕಂಡುಲಾನಾಳ ತಲೆಯನ್ನು ಕೊಡಲಿಯಿಂದ ಕಡಿದು ಕೊಲೆಗೈದಿದ್ದ. ರಕ್ತವನ್ನು ಸಂಗ್ರಹಿಸಿ, ಅದನ್ನು ಭತ್ತದ ಬೀಜದೊಂದಿಗೆ ಮಿಶ್ರಮಾಡಿದ್ದ. ಇದರಿಂದ ಉತ್ತಮ ಫಸಲು ಬರುತ್ತದೆ ಎಂಬುದು ಆತನ ಮೂಢನಂಬಿಕೆಯಾಗಿತ್ತು.
ಈ ಬರ್ಬರ ಘಟನೆಯು ಕಳೆದ ವರ್ಷದ ಏಪ್ರಿಲ್ 26ರಂದು ಬುಡಕಟ್ಟು ಜನರೇ ಹೆಚ್ಚಾಗಿರುವ ಅಡಪತಾರ್ ಎಂಬ ಹಳ್ಳಿಯಲ್ಲಿ ನಡೆದಿತ್ತು.