ಪಾಕಿಸ್ತಾನದ ಗುಪ್ತಚರ ಇಲಾಖೆಗೆ ಭಾರತದ ರಹಸ್ಯ ದಾಖಲೆಗಳನ್ನು ಹಸ್ತಾಂತರಿಸಿದ ಆರೋಪ ಎದುರಿಸುತ್ತಿರುವ ಭಾರತದ ರಾಜತಾಂತ್ರಿಕ ಅಧಿಕಾರಿ ಮಾಧುರಿ ಗುಪ್ತಾಳ ಜಾಮೀನು ಅರ್ಜಿಯನ್ನು ದೆಹಲಿ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಬಂಧನದಲ್ಲಿರುವ ದೇಶದ್ರೋಹಿ ಮಾಧುರಿ ಗುಪ್ತಾಗೆ ಜಾಮೀನು ನೀಡುವಂತೆ ಕೋರಿ ಆಕೆಯ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.
ಪಾಕಿಸ್ತಾನದ ಗುಪ್ತಚರ ಇಲಾಖೆಗೆ ದೇಶದ ರಹಸ್ಯಗಳನ್ನು ಹಸ್ತಾಂತರಿಸಿದ ಆಪಾದನೆಗಾಗಿ ಬಂಧನದಲ್ಲಿರುವ ರಾಜತಾಂತ್ರಿಕ ಅಧಿಕಾರಿ ಮಾಧುರಿ ಗುಪ್ತಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸಲಾಗಿತ್ತು.
ಗೌಪ್ಯ ವಿಚಾರಣೆ ಸಂದರ್ಭದಲ್ಲಿ ಮುಂದಿನ ಕ್ರಮಕ್ಕಾಗಿ ಸರ್ಕಾರದ ಅನುಮತಿ ಪಡೆಯಲು ಅಗತ್ಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದರಿಂದ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕವೇರಿ ಬವೇಜಾ ಅವರು ನ್ಯಾಯಾಂಗ ಬಂಧನದ ಅವಧಿಯನ್ನು ಮೇ 29ರ ವರೆಗೆ ವಿಸ್ತರಿಸಿದ್ದರು.
ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಭಾರತಕ್ಕೆ ಸಂಬಂಧಪಟ್ಟ ಅಮೂಲ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದ ಮೇಲೆ ಇಸ್ಲಾಮಾಬಾದ್‌ನಲ್ಲಿದ್ದ ಭಾರತ ರಾಯಭಾರಿ ಕಚೇರಿಯ 2ನೇ ದರ್ಜೆಯ ಅಧಿಕಾರಿ ಗುಪ್ತಾಳನ್ನು ಭಾರತದಲ್ಲಿ ಬಂಧಿಸಲಾಗಿತ್ತು.