ನಕ್ಸಲರು ನಮ್ಮವರೇ, ಮಾತುಕತೆಯೊಂದೇ ವಿವಾದಕ್ಕೆ ಪರಿಹಾರ ಎಂಬುದನ್ನು ನಾವು ಅವರಿಗೆ ಮನದಟ್ಟು ಮಾಡಬೇಕು ಎಂದು ಹೇಳುವ ಮೂಲಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಬಿಜೆಪಿ ಸ್ಪಷ್ಟನೆ ನೀಡಿದ್ದು, ಮಾಧ್ಯಮಗಳು ಮೋದಿ ಹೇಳಿಕೆಯನ್ನು ತಿರುಚಿವೆ ಎಂದು ಹೇಳಿದೆ.
ಈ ನಡುವೆ, ಯೋಜನಾ ಆಯೋಗದ ಭೇಟಿಗಾಗಿ ರಾಜಧಾನಿ ದೆಹಲಿಗೆ ಆಗಮಿಸಿದ್ದ ಮೋದಿ ಕೂಡ, 'ಸರಕಾರವು ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಗ್ಧ ಜನರ ಹತ್ಯೆ ಸಹಿಸಲಾಗದು. ಅವರು ಸಮಾಜವನ್ನೇ ನಿರ್ನಾಮ ಮಾಡುತ್ತಿದ್ದಾರೆ. ಇಂತಹವುಗಳನ್ನು ನಿರ್ಮೂಲಗೊಳಿಸಬೇಕು' ಎಂದು ಹೇಳಿಕೆ ನೀಡಿದ್ದಾರೆ.
ನಕ್ಸಲರ ವಿರುದ್ಧ ಪ್ರಬಲ, ತೀಕ್ಷ್ಣ ಕಾರ್ಯಾಚರಣೆಗೆ ಸದಾ ಬೆಂಬಲಿಸುತ್ತಿರುವ ಬಿಜೆಪಿ ನಿಲುವಿಗೆ ಮೋದಿ ನೀಡಿದ್ದರೆನ್ನಲಾದ ಹೇಳಿಕೆಗಳು ವ್ಯತಿರಿಕ್ತವಾಗಿದ್ದವು. ಹೀಗಾಗಿ ಈ ಕುರಿತು ಸ್ಪಷ್ಟನೆ ನೀಡಿರುವ ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್, ಇದು ಮಾಧ್ಯಮಗಳದೇ ತಪ್ಪು ಕಲ್ಪನೆ ಎಂದಿದ್ದಾರೆ.
ಬಿಜೆಪಿ ಮುಖ್ಯಾಲಯದಲ್ಲಿ, ಗುಜರಾತ್ ಮಾಹಿತಿ ಅಧಿಕಾರಿ ನೀಡಿರುವ ಹೇಳಿಕೆಯನ್ನು ವಿತರಿಸಲಾಗಿದ್ದು, ಅದರ ಪ್ರಕಾರ, ಆಲಿಘರ್ ಮಂಗಲಾಯತನ್ ವಿವಿಯ ವಿದ್ಯಾರ್ಥಿಯೊಬ್ಬ, ಮಾವೋವಾದಕ್ಕೆ ಮಾರುಹೋಗಿ ಹಿಂಸಾ ಮಾರ್ಗ ತುಳಿಯುವ ಯುವಕರಿಗೆ ನಿಮ್ಮ ಸಂದೇಶ ಏನು ಎಂದು ಕೇಳಿದಾಗ, 'ಮಾತುಕತೆ' ಕುರಿತು ಮೋದಿ ಮಾತೆತ್ತಿದ್ದರು. ಮಾಧ್ಯಮಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಅನಗತ್ಯ ವಿವಾದ ಸೃಷ್ಟಿಸಿವೆ ಎಂದು ಮಾಹಿತಿ ಅಧಿಕಾರಿ ತಿಳಿಸಿದ್ದಾರೆ.