ಹಿಂದೂತ್ವದ ಪರ ಹಾಗೂ ಕಾಂಗ್ರೆಸ್ ಧೋರಣೆ ವಿರುದ್ಧ ಕಿಡಿಕಾರುತ್ತಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನಕ್ಸಲೀಯರು ಬಗ್ಗೆ ಮೃದು ಧೋರಣೆ ತಾಳಿದ್ದಾರೆಯೇ ಎಂಬ ಶಂಕೆ ಮೂಡುವಂತೆ, ನಕ್ಸಲೀಯರು ನಮ್ಮ ನಡುವೆಯೇ ಇರುವ ಜನರಾಗಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಅವರೊಂದಿಗೆ ಮೊದಲು ಮಾತುಕತೆಗೆ ಮುಂದಾಗಬೇಕು ಎಂದು ಸಲಹೆ ನೀಡುವ ಮೂಲಕ ಬಿಜೆಪಿಗೆ ಅಚ್ಚರಿಯನ್ನುಂಟು ಮಾಡಿದ್ದಾರೆ.
ಹೌದು...ಇದು ನರೇಂದ್ರ ಮೋದಿಯವರ ದೃಷ್ಟಿಕೋನವಾಗಿದೆ. ನಕ್ಸಲೀಯರು ನಮ್ಮದೇ ಜನರಾಗಿದ್ದಾರೆ. ಹಿಂಸಾಚಾರದಿಂದ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಅವರಿಗೆ ವಿವರಿಸಿ ಹೇಳಬೇಕಾಗಿದೆ. ಆ ನಿಟ್ಟಿನಲ್ಲಿ ನಕ್ಸಲೀಯರೊಂದಿಗೆ ಮಾತುಕತೆ ನಡೆಸುವುದೇ ಉತ್ತಮವಾದ ಮಾರ್ಗ ಎಂದು ಅಲಿಘಡದಲ್ಲಿ ನಡೆದ ಸಮಾರಂಭವೊಂದರಲ್ಲಿ ತಮ್ಮ ಅಣಿಮುತ್ತನ್ನು ಉದುರಿಸಿದ್ದಾರೆ.
ಒಂದೆಡೆ ಭಾರತೀಯ ಜನತಾ ಪಕ್ಷ, ನಕ್ಸಲೀಯರನ್ನು ದಮನ ಮಾಡುವಲ್ಲಿ ಕೇಂದ್ರದ ಯುಪಿಎ ಸರ್ಕಾರ ಮೃದು ಧೋರಣೆ ತಾಳಿದೆ ಎಂದು ಆರೋಪಿಸುತ್ತಿರುವ ಬೆನ್ನಲ್ಲೇ, ನಕ್ಸಲೀಯರ ಪರವಾದ ನರೇಂದ್ರ ಮೋದಿಯವರ ಹೇಳಿಕೆ ಬಿಜೆಪಿಗೆ ಅಚ್ಚರಿಯನ್ನು ಉಂಟು ಮಾಡಿದೆ.
ನಕ್ಸಲೀಯರು ನಡೆಸುತ್ತಿರುವ ಮಾರಣಹೋಮದ ಬಗ್ಗೆ ಕಿಡಿಕಾರಿದ್ದ ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು, ಬುಧವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನಕ್ಸಲೀಯರು ಈ ದೇಶದ ದೊಡ್ಡ ಭಯೋತ್ಪಾದಕರು ಎಂದು ಗುಡುಗಿದ್ದರು. ನಕ್ಸಲಿಸಂ ಎಂಬುದ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಗನ್‌ಪಾಯಿಂಟ್ ಮೂಲಕವೇ ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ನಕ್ಸಲೀಯರನ್ನು ಮಟ್ಟಹಾಕಲೇಬೇಕು ಎಂದು ಆಗ್ರಹಿಸಿದ್ದರು.