ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಡಾರ್ಜಿಲಿಂಗ್: ಗೂರ್ಖಾ ಲೀಗ್ ಅಧ್ಯಕ್ಷ ತಮಂಗ್ ಬರ್ಬರ ಹತ್ಯೆ (Madan Tamang | Darjeeling | Gorkhaland | Buddhadeb Bhattacharjee)
ಡಾರ್ಜಿಲಿಂಗ್: ಗೂರ್ಖಾ ಲೀಗ್ ಅಧ್ಯಕ್ಷ ತಮಂಗ್ ಬರ್ಬರ ಹತ್ಯೆ
ಸಿಲಿಗುರಿ, ಶುಕ್ರವಾರ, 21 ಮೇ 2010( 19:43 IST )
ಅಖಿಲ ಭಾರತ ಗೂರ್ಖಾ ಲೀಗ್ ಅಧ್ಯಕ್ಷ ಹಾಗೂ ಪ್ರತ್ಯೇಕ ಗೂರ್ಖಾಲ್ಯಾಂಡ್‌ಗಾಗಿ ಹೋರಾಟ ನಡೆಸುತ್ತಿದ್ದ ಮದನ್ ತಮಂಗ್ ಅವರು ಶುಕ್ರವಾರ ಸಾರ್ವಜನಿಕ ಸಭಾ ಕಾರ್ಯಕ್ರಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ವೇಳೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಹತ್ಯೆಗೈದ ಘಟನೆ ಡಾರ್ಜಿಲಿಂಗ್‌ನಲ್ಲಿ ನಡೆದಿದೆ.
ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ಇಲ್ಲಿನ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮದನ್ ತಮಂಗ್ ಅವರ ಮೇಲೆ ದುಷ್ಕರ್ಮಿಗಳು ಖಡ್ಗ ಮತ್ತು ಹರಿತವಾದ ಕುಕ್ರಿ ಕತ್ತಿಯಿಂದ ಹಲ್ಲೆ ನಡೆಸಿ ಹತ್ಯೆಗೈದರು ಎಂದು ಡಾರ್ಜಿಲಿಂಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಧೀಂದ್ರ ಗುಪ್ತ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಮಂಗ್ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದನ್ನು ಉತ್ತರ ಬೆಂಗಾಲ್ ಪೊಲೀಸ್ ಮಹಾನಿರ್ದೇಶಕ ಕೆ.ಎಲ್.ತಾಮ್ಟಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಖಚಿತಪಡಿಸಿದ್ದಾರೆ. ದಾಳಿಯಲ್ಲಿ ತಮಂಗ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ದಾರ್ಜಿಲಿಂಗ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.
ತಮಂಗ್ ಅವರ ಹತ್ಯೆ ನಡೆದಿರುವ ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ದಾರ್ಜಿಲಿಂಗ್, ಕಾಲಿಂಪೊಂಗ್ ಹಾಗೂ ಕುರ್ಸೆಂಗ್ ಪ್ರದೇಶಗಳಲ್ಲಿ ಜನರು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಅಲ್ಲದೇ ವಾಹನ ಸಂಚಾರ ಕೂಡ ಸ್ಥಗಿತಗೊಂಡಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಮಂಗ್ ಹತ್ಯೆಯ ಹಿನ್ನಲೆಯಲ್ಲಿ ಹಿಂಸಾಚಾರ ಭುಗಿಲೇಳದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಕೂಡಲೇ ತುರ್ತುಸಭೆಯನ್ನು ಕರೆದು ಚರ್ಚೆ ನಡೆಸಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.