ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಿಷನರಿ ಗ್ರಹಾಂ ಹತ್ಯೆ; ದಾರಾ ಸಿಂಗ್‌ಗೆ ಗಲ್ಲು ಶಿಕ್ಷೆಯಿಲ್ಲ
(Dara Singh | Supreme Court | Graham Steins | Australian missionary)
ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಿದ್ದ ಆರೋಪ ಎದುರಿಸುತ್ತಿದ್ದ ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೈನ್ಸ್ ಮತ್ತು ಅವರ ಇಬ್ಬರು ಮಕ್ಕಳ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾರಾ ಸಿಂಗ್‌ಗೆ ಮರಣ ದಂಡನೆ ವಿಧಿಸಬೇಕು ಎನ್ನುವ ಸಿಬಿಐ ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.
1999ರ ಜನವರಿ 22ರಂದು ಒರಿಸ್ಸಾದ ಕಿಯೋಂಜರ್ ಜಿಲ್ಲೆಯ ಮನೋಹರಪುರ ಗ್ರಾಮದಲ್ಲಿ ನಡೆದಿದ್ದ ಈ ಘಟನೆಯಲ್ಲಿ ತಪ್ಪಿತಸ್ಥ ಎಂದು ತೀರ್ಪು ಪಡೆದುಕೊಂಡಿದ್ದ ದಾರಾ ಸಿಂಗ್‌ಗೆ ಒರಿಸ್ಸಾ ಉಚ್ಚ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಗಲ್ಲುಶಿಕ್ಷೆ ಮನವಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ.
PR
ಮಿಷನರಿ ಸ್ಟೈನ್ಸ್ ಮತ್ತು ಫಿಲಿಪ್ (10) ಮತ್ತು ತಿಮೋತಿ (6) ಎಂಬ ಅವರ ಇಬ್ಬರು ಅಪ್ರಾಪ್ತ ಮಕ್ಕಳನ್ನು ಹತ್ಯೆಗೈದ ಪ್ರಕರಣದಲ್ಲಿ ಎಲ್ಲಾ 13 ಮಂದಿಯೂ ತಪ್ಪಿತಸ್ಥರು ಎಂದು 2003ರ ಸೆಪ್ಟೆಂಬರ್ ತಿಂಗಳಲ್ಲಿ ವಿಚಾರಣಾ ನ್ಯಾಯಾಲಯವು ತೀರ್ಪು ನೀಡಿತ್ತು. ಇದರಲ್ಲಿ ದಾರಾ ಸಿಂಗ್‌ಗೆ ಮರಣದಂಡನೆ ಹಾಗೂ ಆತನ ಸಹಚರ ಮಹೇಂದ್ರ ಹೇಂಬ್ರಮ್ ಸೇರಿದಂತೆ ಇತರರಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿತ್ತು.
ದಾರಾ ಸಿಂಗ್‌ಗೆ ನೀಡಲಾದ ಗಲ್ಲುಶಿಕ್ಷೆಯನ್ನು 2005ರ ಮೇ 19ರಂದು ಒರಿಸ್ಸಾ ಹೈಕೋರ್ಟ್ ಜೀವಾವಧಿಗೆ ಇಳಿಕೆ ಮಾಡಿತ್ತು. ಮಹೇಂದ್ರ ಹೇಂಬ್ರಮ್ ಎಂಬಾತನೂ ದೋಷಿ ಎಂದು ಕೋರ್ಟ್ ಹೇಳಿದರೂ, ಇತರ 11 ಮಂದಿ ಆರೋಪಿಗಳನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು.
ಇದರ ವಿರುದ್ಧ ದಾರಾ ಸಿಂಗ್ ಸುಪ್ರೀಂ ಕೋರ್ಟಿನಲ್ಲಿ 2005ರ ಅಕ್ಟೋಬರ್ ತಿಂಗಳಲ್ಲಿ ಮೇಲ್ಮನವಿ ಮಾಡಿದ್ದ. ತನ್ನನ್ನು ಅಪರಾಧಿ ಎಂದು ಘೋಷಿಸಿರುವುದು ಮತ್ತು ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಆತ ಪ್ರಶ್ನಿಸಿದ್ದ.
ಮತಾಂತರಿ ಮಿಷನರಿಯಾತ... ತನ್ನ ಇಬ್ಬರು ಮಕ್ಕಳೊಂದಿಗೆ ಕಿಯೋಂಜರ್ ಜಿಲ್ಲೆಯ ಚರ್ಚೊಂದರ ಹೊರಗಡೆ ಕಾರಿನ ಒಳಗೆ ಮಲಗಿ ನಿದ್ರಿಸುತ್ತಿದ್ದ ಹೊತ್ತಿನಲ್ಲಿ ಸಜೀವ ದಹನಗೊಂಡ ಡಾ. ಗ್ರಹಾಂ ಸ್ಟುವರ್ಟ್ ಸ್ಟೈನ್ಸ್, ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಿದ್ದ ಆರೋಪವನ್ನು ಎದುರಿಸುತ್ತಿದ್ದವರು.
1965ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದ ಆಸ್ಟ್ರೇಲಿಯಾ ಮಿಷನರಿ, ಕುಷ್ಠರೋಗಿಗಳ ಆರೈಕೆ ಮತ್ತು ಬಡವರ ಏಳ್ಗೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟವರು. ಆದರೆ ಇವರು ಹಿಂದೂಗಳನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದವು.
ಸಾಮಾನ್ಯವಾಗಿ ಕ್ರೈಸ್ತ ಮಿಷನರಿಗಳು ಮತಾಂತರಕ್ಕೆ ಯತ್ನಿಸುವುದು ಬುಡಕಟ್ಟು ಜನಾಂಗದವರು ಮತ್ತು ದಲಿತರು ಹೆಚ್ಚಾಗಿರುವ ಪ್ರದೇಶಗಳಲ್ಲಿ. ಕಿಯೋಜಂಜರ್ ಜಿಲ್ಲೆ ಇದಕ್ಕೆ ಹತ್ತಿರವಾಗಿತ್ತು. ಈ ಜಿಲ್ಲೆಯಲ್ಲಿನ ಒಟ್ಟು 16 ಲಕ್ಷ ಜನಸಂಖ್ಯೆಯಲ್ಲಿ ಶೇ.45 ಬುಡಕಟ್ಟು ಜನಾಂಗದವರು. ಶೇ.12ರಷ್ಟು ದಲಿತರು.
ನ್ಯಾಯ ಸಿಕ್ಕಿದೆ, ಸಂತೋಷವಾಗಿದೆ... ಹೀಗೆಂದು ಹೇಳಿರುವುದು ಮಿಷನರಿ ಸ್ಟೈನ್ಸ್ ಆಪ್ತ ಗೆಳೆಯರು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ದಾರಾ ಸಿಂಗ್ ತಾನು ಎಸಗಿರುವ ಕೃತ್ಯಕ್ಕಾಗಿ ಪಶ್ಚಾತಾಪ ಪಡಬೇಕು ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡಿದೆ. ಯಾವ ರೀತಿಯಲ್ಲಾದರೂ ನ್ಯಾಯ ಸಿಕ್ಕಿರುವುದು ಸಂತಸ ತಂದಿದೆ. ಜೀವನ ಎನ್ನುವುದು ಅಮೂಲ್ಯ. ಆರೋಪಿಗೆ ಯಾವ ಶಿಕ್ಷೆ ನೀಡಬೇಕೆನ್ನುವುದು ನ್ಯಾಯಾಲಯಕ್ಕೆ ಬಿಟ್ಟದ್ದು. ಜೀವಾವಧಿ ಶಿಕ್ಷೆ ನೀಡಬೇಕೆಂದು ನ್ಯಾಯಾಲಯ ನಿರ್ಧರಿಸಿದೆ. ಹಾಗಾಗಿ ನಾವದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇವೆ ಎಂದು ಸ್ಟೈನ್ ಗೆಳೆಯ ತಿಳಿಸಿದರು.