ಇದು ದೇಶದಲ್ಲಿಯೇ ಪ್ರಪ್ರಥಮ ಅಂಡರ್ಪಾಸ್ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿಕೆ ನೀಡುವಾಗ ಪ್ರಾಯಶಃ ಇಂಥದ್ದೊಂದು ಕಾಣದ ತೊಡಕು ಕಾಣಬರುತ್ತದೆ ಎಂದು ಅನಿಸಿರಲಿಲ್ಲವೇನೋ. ಆದರೆ ಮಹತ್ವಾಕಾಂಕ್ಷೀ ಪ್ರಯತ್ನಕ್ಕೆ ನೀರಿನ ಕೊಳವೆಯೊಂದು ತಣ್ಣೀರೆರಚಿರುವುದು ಅಧಿಕಾರಿಗಳಿಗೆ ಮಾತ್ರವಲ್ಲ ಜನರಿಗೂ ಸಂಕಷ್ಟವನ್ನು ತಂದಿತ್ತಿದೆ.
ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ 72 ಗಂಟೆಯೊಳಗಾಗಿ ನಿರ್ಮಿಸಬಲ್ಲ ಅಂಡರ್ ಪಾಸ್ ಯೋಜನೆಯನ್ನು ಬಿಬಿಎಂಪಿ ಹಮ್ಮಿಕೊಂಡಾಗ ಸಂಬಂಧಿಸಿದ ಇಲಾಖೆಗಳೊಂದಿಗೆ ಒಂದು ಹಂತದ ಸಮಾಲೋಚನೆ ನಡೆಸಲಾಗಿತ್ತು. ಅದರೆ ಈಗ ಕಾಮಗಾರಿ ಆರಂಭವಾದ ಮೇಲೆ ನೀರಿನ ಪೈಪ್ ಒಡೆದು ತೊಂದರೆ ಪ್ರಾರಂಭವಾಗಿ ಸದಾಶಿವ ನಗರ, ಮಲ್ಲೇಶ್ವರಂ ಮುಂತಾದ ಪ್ರದೇಶಗಳ ನೀರು ಸರಬರಾಜು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದು ಈಗ ಎಲ್ಲರಿಗೂ ಗೊತ್ತಿರುವ ವಿಷಯ.
ಆದರೆ ಹೀಗೆ ಅಡ್ಡಿಪಡಿಸಿದ ನೀರಿನ ಕೊಳವೆ ಬ್ರಿಟಿಷರ ಕಾಲದಲ್ಲಿ ಅಳವಡಿಸಲಾಗಿದ್ದು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ತಿಪ್ಪಗೊಂಡನ ಹಳ್ಳಿ ಜಲಾಶಯದಿಂದ ಈ ಕೊಳವೆಯನ್ನು ಹಾಕಲಾಗಿದ್ದು ಇದರ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ ಎಂದು ಗೊತ್ತಾಗಿದೆ. ಕಾಮಗಾರಿಯಲ್ಲಿ ವ್ಯತ್ಯಯ ಉಂಟಾಗಿರುವುದರ ಜೊತೆಗೆ ನಿಗದಿತ ಅವಧಿಯಲ್ಲಿ ಅದು ಪೂರ್ಣಗೊಳ್ಳುವುದೂ ಅನುಮಾನವಾಗಿದೆ. ಲಕ್ಷಣಗಳನ್ನು ನೋಡಿದರೆ ಇದಕ್ಕೆ ಒಂದು ವಾರ ಹಿಡಿಯಬಹುದು ಎಂಬ ಅಭಿಪ್ರಾಯಗಳು ಹೊರಬೀಳುತ್ತಿವೆ. ಹೀಗಾಗಿ ಕಾವೇರಿ ಜಂಕ್ಷನ್ನಿನಲ್ಲಿ ಸಂಚಾರಿಗರ ಜಂಜಾಟ ಇನ್ನೂ ಹೆಚ್ಚಿದೆ. ಅರ್ಧ ಗಂಟೆಯಲ್ಲಿ ಸವೆಸಬೇಕಾದ ಹಾದಿಗೆ ಒಂದೂವರೆ ಗಂಟೆಯನ್ನು ತೆಗೆದುಕೊಳ್ಳಬೇಕಾಗಿದೆ ಎಂಬುದು ಜನರ ಅಳಲು.
|