ಮಾಜಿ ಉಪ ಪ್ರಧಾನಿ ಹಾಗೂ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿಯವರು ನಗರಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪಾಳೆಯದಲ್ಲಿ ಚಟುವಟಿಕೆ ಬಿರುಸುಗೊಂಡಿದೆ.
ರಾಜ್ಯ ಬಿಜೆಪಿಯ ಅನಂತಕುಮಾರ್ ಬಣ ಹಾಗೂ ಯಡಿಯೂರಪ್ಪ ಬಣಗಳ ನಡುವೆ ನಡೆಯುತ್ತಿರುವ ಶೀತಲ ಸಮರ ಅಡ್ವಾಣಿಯವರನ್ನು ಬೆಂಗಳೂರಿಗೆ ಕರೆತಂದಿದೆ ಎಂದೇ ಅರ್ಥೈಸಲಾಗುತ್ತಿದ್ದು, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರಿಬ್ಬರ ನಡುವೆ ತೇಪೆ ಹಚ್ಚುವ ಕಾರ್ಯ ಅಡ್ವಾಣಿಯವರಿಂದ ನೆರವೇರಲಿದೆ ಎಂದು ಬಿಜೆಪಿ ಕಟ್ಟಾಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಯಾವ ಪಕ್ಷ ಸೇರುವುದೆಂಬ ಗೊಂದಲದಲ್ಲಿರುವ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಬಂಡಾಯ ನಾಯಕ ಎಂ.ಪಿ.ಪ್ರಕಾಶ್‌ರವರನ್ನೂ ಇದೇ ಸಂದರ್ಭದಲ್ಲಿ ಅಡ್ವಾಣಿಯವರು ಭೇಟಿ ಮಾಡಲಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಪ್ರಕಾಶ್ ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಬಂದರೆ ಪಕ್ಷದ ವರ್ಚಸ್ಸು ಹೆಚ್ಚುವುದಲ್ಲದೆ ರಾಜ್ಯದ ಪ್ರಬಲ ಲಿಂಗಾಯತ ಸಮುದಾಯದ ಪ್ರೀತಿಗೂ ಪಾತ್ರರಾಗಬಹುದು ಎಂಬ ವಿಶ್ವಾಸ ಹೊಂದಿರುವ ರಾಜ್ಯದ ಕೆಲ ನಾಯಕರು ಅವರಿಬ್ಬರ ನಡುವಿನ ಭೇಟಿಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಈ ಸುದ್ದಿ ಮೂಲಗಳು ತಿಳಿಸಿವೆ.
|