ಗೇಲ್ ಇಂಡಿಯಾ ಸಂಸ್ಥೆಯು ದಾಬೋಲ್‌ನಿಂದ ಬೆಂಗಳೂರಿಗೆ ಪೈಪ್ ಲೈನ್ ಅಳವಡಿಸಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿರುವುದರಿಂದ ರಾಜ್ಯದಲ್ಲಿ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನೆ ಕೇಂದ್ರಗಳು 3 ವರ್ಷಗಳಲ್ಲಿ ಸ್ಥಾಪನೆಯಾಗಲಿವೆ ಎಂದು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿನ ವಿದ್ಯುತ್ ಕೊರತೆಗೆ ಪರಿಹಾರ ಸಿಕ್ಕಂತಾಗಿದೆ.
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಕೇಂದ್ರಗಳನ್ನು ಬಿಡದಿ, ಘಟಪ್ರಭ ಹಾಗೂ ಸೂಪಾ ಬಳಿ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಗೇಲ್ ಇಂಡಿಯಾ ಹಾಗೂ ರಿಲಯನ್ಸ್ ಕಂಪೆನಿಗಳು ಜಂಟಿಯಾಗಿ ಇದನ್ನು ಕೈಗೆತ್ತಿಕೊಳ್ಳಲಿವೆ. ಗೇಲ್ ಇಂಡಿಯಾ ಸಂಸ್ಥೆ ಗಳಿಸಿದ ಲಾಭವನ್ನು ಇತರ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಹಾಗಿಲ್ಲವಾದ್ದರಿಂದ ಪೈಪ್ ಲೈನ್ ಮಾರ್ಗ ನಿರ್ಮಾಣ ತ್ವರಿತಗತಿಯಲ್ಲಿ ನಡೆಯಲಿದೆ.
ಅನಿಲ ದರ ಮುಂದಿನ ವರ್ಷದಿಂದ ಸ್ಥಿರಗೊಳ್ಳುವ ಸೂಚನೆ ಕಂಡು ಬಂದಿರುವುದರಿಂದ ವಿದ್ಯುತ್ ದರದಲ್ಲೂ ಏರಿಕೆಯಾಗುವ ಸಂಭವವಿದೆ. ಇದರಂತೆ ವಿದ್ಯುತ್ ಉತ್ಪಾದನೆ ದರ ಪ್ರತಿ ಯೂನಿಟ್‌ಗೆ 4.50ರೂ ಆಗಲಿದೆ. ಮೂರು ವರ್ಷದಲ್ಲಿ ದರ ಇನ್ನಷ್ಟು ಏರುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ ಅಧಿಕಾರಿಗಳು, ನಗರದಲ್ಲಿ ಕೈಗಾರಿಕೆಗಳ ಸಂಖ್ಯೆ ಅಧಿಕಗೊಂಡಲ್ಲಿ ಈ ದರ ಹೆಚ್ಚೇನೂ ಅನಿಸದು ಎಂದು ತಿಳಿಸಿದ್ದಾರೆ.
ಬಿಡದಿ ಬಳಿ ಈಗಾಗಲೇ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಸ್ಥಾಪಿಸಲು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಕಲ್ಲಿದ್ದಲಿಗಿಂತ ನೈಸರ್ಗಿಕ ಅನಿಲ ಸೂಕ್ತವೆಂದು ತೀರ್ಮಾನಿಸಿದ್ದರಿಂದ ಕೇಂದ್ರ ಸ್ಥಾಪನೆಯಾಗಲಿಲ್ಲ. ಈಗ ನೈಸರ್ಗಿಕ ಅನಿಲ ಬರುವುದು ಖಾತ್ರಿಯಾದ ಹಿನ್ನೆಲೆಯಲ್ಲಿ ಇಲ್ಲಿ 2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಕೇಂದ್ರ ಸ್ಥಾಪಿಸಬಹುದು. ಅಲ್ಲದೆ, ಸೂಪಾದಲ್ಲಿ ಜಲ ವಿದ್ಯುತ್ ಕೇಂದ್ರ ಈಗಾಗಲೇ ಸ್ಥಾಪಿತವಾಗಿರುವುದರಿಂದ ನೈಸರ್ಗಿಕ ಅನಿಲ ಆಧರಿತ ವಿದ್ಯುತ್ ಕೇಂದ್ರ ಸ್ಥಾಪಿಸುವುದು ಕಷ್ಟವಲ್ಲ. ಅದೇ ರೀತಿ ಘಟಪ್ರಭದಲ್ಲೂ ಮತ್ತೊಂದು ಘಟಕ ಸ್ಥಾಪಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|