ಪಕ್ಷದೊಳಗೆ ಭಿನ್ನಮತ ಇದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂಬ ಕೂಗಿಗೆ ಅರ್ಥವಿಲ್ಲ ಎಂದಿರುವ ಸಾರಿಗೆ ಸಚಿವ ಆರ್.ಅಶೋಕ್ ಯಾವುದೇ ಕಾರಣಕ್ಕೂ ಯಡಿಯೂರಪ್ಪನವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಿಜೆಪಿ ಪಕ್ಷದೊಳಗೆ ಎದ್ದಿರುವ ಭಿನ್ನಮತದ ಹಿನ್ನೆಲೆಯಲ್ಲಿ ಪ್ರತಿ ಪಕ್ಷದ ನಾಯಕರೆಲ್ಲ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅಶೋಕ್ ಪ್ರತಿಕ್ರಿಯೆ ನೀಡಿ ಮಾತನಾಡಿದರು.
ಕಳೆದ ನಲವತ್ತು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಲು ಯಡಿಯೂರಪ್ಪ ದುಡಿದಿದ್ದಾರೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರು. ಪಕ್ಷದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳನ್ನು ಬಿಟ್ಟರೆ ಮತ್ತೆ ಯಾವ ಸಮಸ್ಯೆಯು ಇಲ್ಲ. ಪಕ್ಷದ ಮಟ್ಟದಲ್ಲಿಯೇ ಈ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದರು.
ಭಿನ್ನಮತ, ಭಿನ್ನಾಭಿಪ್ರಾಯ ಎಲ್ಲಾ ಪಕ್ಷದಲ್ಲಿ ಸರ್ವೆ ಸಾಮಾನ್ಯ. ಎಲ್ಲಾ ಪಕ್ಷದಲ್ಲಿ ಸಮಸ್ಯೆ ಇದ್ದಂತೆ ನಮ್ಮ ಪಕ್ಷದಲ್ಲೂ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಯಲ್ಲಿದ್ದಾರೆ. ದೂರವಾಣಿ ಮೂಲಕ ಇಂಧನ ಸಚಿವ ಈಶ್ವರಪ್ಪ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದಾರೆ. ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಹೊರತು ಮುಖ್ಯಮಂತ್ರಿಗಳನ್ನು ಬದಲಿಸುವ ಮೂಲಕ ಅಲ್ಲ ಎಂದು ಸ್ಪಷ್ಟಪಡಿಸಿದರು. |