'ನಮಗೆ ಅಧಿಕಾರ ಎಂದಿಗೂ ಮುಖ್ಯವಲ್ಲ, ಅಧಿಕಾರ ಇದ್ರೂ ಒಂದೇ ಇಲ್ಲದಿದ್ರೂ ಒಂದೇ. ನಮಗೆ ಜನರ ಹಿತ ಮುಖ್ಯ ಎಂದಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಆರೋಗ್ಯ ಸಚಿವ ಶ್ರೀರಾಮುಲು ಅವರು ಇಡೀ ಉತ್ತರ ಕರ್ನಾಟಕಕ್ಕೆ ಹುಲಿ ಇದ್ದಂತೆ. ಆದರೆ ಕೆಲವರು ಹುಲಿಯಾಗಲು ಇದೀಗ ಹೊರಟಿದ್ದಾರೆ' ಎಂದು ಪರೋಕ್ಷವಾಗಿ ಪಕ್ಷದ ಕೆಲವು ನಾಯಕರ ವಿರುದ್ಧ ವ್ಯಂಗ್ಯವಾಡಿದರು.
ಉತ್ತರ ಕರ್ನಾಟಕದ ನಿಜವಾದ ಹುಲಿ ಶ್ರೀರಾಮುಲು, ಅವರು ಮಾತು ಕೊಟ್ಟರೆ ತಪ್ಪುವುದಿಲ್ಲ, ತಪ್ಪಿದರೆ ಪ್ರಾಣ ಕೊಡಲು ಸಿದ್ದ. ನಾವು ಬಡವರಾಗಿದ್ದವರು. ಹತ್ತು ವರ್ಷಗಳ ಹಿಂದೆ ನಾವು ಸಾಮಾನ್ಯರಂತೆ ಇದ್ದವರು. ನಾವು ಶ್ರೀಮಂತರಾಗಿರುವುದು ಶ್ರೀರಾಮುಲು ಅವರಂಥ ಹಾಗೂ ನಿಮ್ಮಂಥ ಜನರಿಂದ ಎಂದರು.
ಅವರು ಬುಧವಾರ ಸಿರಗುಪ್ಪದ ಮಾಟೂರಿನಲ್ಲಿ ನೆರೆ ಸಂತ್ರಸ್ತರಿಗಾಗಿ ಐವತ್ತು ಸಾವಿರ ಮನೆ ಕಟ್ಟಿಸುವ ನವಗ್ರಾಮ ಯೋಜನೆಗೆ ಸಚಿವ ಕರುಣಾಕರ ರೆಡ್ಡಿ ಭೂಮಿ ಪೂಜೆ ನೆರವೇರಿಸಿದ ನಂತರ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜನರ ಅಭಿವೃದ್ಧಿಗಾಗಿ ಒಳ್ಳೆಯ ಕೆಲಸ ಮಾಡಲು ಹೊರಟರು ಕೂಡ ಕೆಲವರು ಹೊಟ್ಟೆಕಿಚ್ಚು ಪಡುತ್ತಾರೆ. ನಮ್ಮವರೇ ನಮಗೆ ಅಡ್ಡಗಾಲು ಹಾಕುತ್ತಿದ್ದಾರೆ. ಅಧಿಕಾರದ ದಾಹ ಹೊಂದಿರುವ ಪಿಶಾಚಿಗಳ ರಾಜಕೀಯಕ್ಕೆ ಹೆದರುವುದಿಲ್ಲ ಎಂದು ಕಿಡಿಕಾರಿದರು.
NRB
ನಾವು ಅಧಿಕಾರಕ್ಕಾಗಿ ಎಂದೂ ಅಂಟಿಕೊಂಡಿಲ್ಲ, ಕೆಲವರಿಗೆ ವಯಸ್ಸಾದರೂ ಬುದ್ಧಿ ಬಂದಿಲ್ಲ, ನಿಮ್ಮ ನೀಚ ರಾಜಕಾರಣಕ್ಕೆ ನಾವು ಸೊಪ್ಪು ಹಾಕಲ್ಲ. ನಾವು ಉಗ್ರವಾದಿಗಳೂ ಅಲ್ಲ, ನಿಮ್ಮ ಸುತ್ತಮುತ್ತ ಇರುವವರು ಉಗ್ರಗಾಮಿಗಳು. ಅವರನ್ನು ಮೊದಲು ಹದ್ದುಬಸ್ತಿನಲ್ಲಿ ಇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸದೆ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಇರುವ ಕೆಲವು ನಾಯಕರು ನರಿ ಬುದ್ಧಿ ಹೊಂದಿದ್ದಾರೆ. ನೆರೆ ಸಂತ್ರಸ್ತರು ಒಂದೆಡೆ ಸೂರಿಗಾಗಿ ಒದ್ದಾಡುತ್ತಿದ್ದರೆ ಮತ್ತೊಂದೆಡೆ ಅಧಿಕಾರ ದಾಹ ಹೊಂದಿದವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಅಂತವರಿಗೆ ಜನರೇ ಬುದ್ಧ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ಗಾವಣೆಗೆ ಕಿಡಿ: ಬಳ್ಳಾರಿಯಲ್ಲಿ ಉತ್ತಮವಾಗಿ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಡಿಸಿಎಫ್ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನೂ ದಿಢೀರ್ ವರ್ಗಾವಣೆ ಮಾಡಲಾಗಿದೆ. ಇದು ನೀಚತನದ ರಾಜಕಾರಣ ಎಂದು ಸಿಎಂ ವಿರುದ್ಧ ಜನಾರ್ದನ ರೆಡ್ಡಿ ಕಿಡಿಕಾರಿದರು. ದುರುದ್ದೇಶದಿಂದಲೇ ನಿಷ್ಠಾವಂತ ಅಧಿಕಾರಿಗಳನ್ನು, ಅದರಲ್ಲೂ ದಲಿತ ಅಧಿಕಾರಿಗಳನ್ನು ವರ್ಗ ಮಾಡುವಂತಹ ಕೆಲಸಕ್ಕೆ ನಮ್ಮವರೇ ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.