ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಮಂಗಳೂರಿನ ಕೆಂಜಾರು ಬಳಿಯಿರುವ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ನಿಯಂತ್ರಣ ತಪ್ಪಿದ್ದರಿಂದ ಅಪಘಾತಕ್ಕೀಡಾಗಿ 158 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದುಬೈಯಿಂದ ಮಂಗಳೂರಿಗೆ ಇಂದು ಬೆಳಿಗ್ಗೆ 6.30 ಗಂಟೆಗೆ ಆಗಮಿಸಿದ ಏರ್‌ಇಂಡಿಯಾ ವಿಮಾನ, ಲ್ಯಾಂಡಿಂಗ್ ಮಾಡುವ ಸಂದರ್ಭದಲ್ಲಿ ಅಕಸ್ಮಿಕವಾಗಿ ನಿಯಂತ್ರಣ ತಪ್ಪಿ ತಗ್ಗುಪ್ರದೇಶಕ್ಕೆ ನುಗ್ಗಿ, ನಂತರ ಸ್ಫೋಟಗೊಂಡಿತು ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.
ಆದರೆ ವಿಮಾನ ದುರಂತದಲ್ಲಿ ಬದುಕುಳಿದವರ ಪ್ರಕಾರ, ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಟೈರ್‌ಗಳು ಸ್ಫೋಟಗೊಂಡ ಶಬ್ದ ಕೇಳಿ ಬಂದಿತ್ತು. ವಿಮಾನ ಅಪಘಾತದಲ್ಲಿ 8 ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಬದುಕುಳಿದಿದ್ದಾರೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.
NRB
ಗೃಹ ಸಚಿವ ವಿ.ಎಸ್.ಆಚಾರ್ಯ ಮಾತನಾಡಿ, ವಿಮಾನ ದುರಂತದಲ್ಲಿ 158 ಮಂದಿ ಸಾವನ್ನಪ್ಪಿದ್ದು, ವಿಮಾನ ನಿಲ್ದಾಣದಿಂದ 10 ಕಿ.ಮಿ. ದೂರದಲ್ಲಿ ವಿಮಾನ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ವಿಮಾನ ಅಪಘಾತ ಸಂಭವಿಸಿದ ಸ್ಥಳದಲ್ಲಿ ಸಮರೋಪಾದಿಯಲ್ಲಿ ತುರ್ತು ಸೇವೆಗಳನ್ನು ಆರಂಭಿಸಲಾಗಿದ್ದು, ವೈದ್ಯರ ತಂಡ ರವಾನಿಸಲಾಗಿದೆ.ಕನಿಷ್ಠ 25 ಅಗ್ನಿಶಾಮಕ ದಳಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ವಿಮಾನ ಅಪಘಾತದಲ್ಲಿ 158 ಮಂದಿ ಪ್ರಯಾಣಿಕರು ಮೃತರಾಗಿದ್ದು, ವಿಮಾನ ದುರಂತದಿಂದ ಆಘಾತವಾಗಿದೆ ಮೃತರಾದ ಕುಟುಂಬಗಳಿಗೆ ಶೋಕ ವ್ಯಕ್ತಪಡಿಸಲು ಮಂಗಳೂರಿಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ.
ವಿಮಾನ ಅಪಘಾತದ ಬಗ್ಗೆ ಹೆಚ್ಚಿನ ವಿವರಣೆಗಳಿಗಾಗಿ ಸಹಾಯವಾಣಿ ಸಂಖ್ಯೆ 0824 - 2220422,011-25656196, 011-25603101 ದೂರವಾಣಿ ಕರೆಗಳನ್ನು ಮಾಡಬಹುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
PR
ಸ್ಥಳದಲ್ಲಿ 15 ವೈದ್ಯರು ಉಪಸ್ಥಿತರಿದ್ದು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ವಿಮಾನದ ಸಂಖ್ಯೆ ಐಎಕ್ಸ್-892 ಸಂಖ್ಯೆಯ ಬೋಯಿಂಗ್ 737-800 ವಿಮಾನದಲ್ಲಿ 160 ಪ್ರಯಾಣಿಕರು ಹಾಗೂ 6 ಮಂದಿ ವಿಮಾನ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಅಲ್ಲದೇ ಒಂಬತ್ತು ಮಂದಿ ಪ್ರಯಾಣಿಕರು ಕೊನೆ ಕ್ಷಣದಲ್ಲಿ ಪ್ರಯಾಣ ರದ್ದು ಮಾಡಿದ್ದರು ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮದ್ಯೆ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ವಿಮಾನ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರಿಗೆ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಅಪಘಾತದಲ್ಲಿ ಮೃತರಾದ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಹಾಗೂ, ಗಾಯಗೊಂಡವರಿಗೆ 50 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಘೋಷಿಸಿದ್ದಾರೆ. ವಿಮಾನ ದುರಂತಕ್ಕೆ ಪ್ರದಾನಿ ಡಾ.ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
PR
ವಿಮಾನ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಹಾಗೂ ಕಾನೂನು ಸಚಿವ ವೀರಪ್ಪ ಮೋಯ್ಲಿ ಮತ್ತು ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.