ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಹೊಗೆ'ಯ ಬೆಂಕಿಗೆ ಕರುಣಾನಿಧಿಯಿಂದ ತುಪ್ಪ
ಅವಿನಾಶ್
'ಸೇತು ನಿರ್ಮಿಸುವುದಕ್ಕಾಗಿ ಶ್ರೀರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ' ಎಂದು ಪ್ರಶ್ನಿಸಿ ಗಮನ ಸೆಳೆದಿದ್ದ ವಯೋವೃದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಮತ್ತೊಮ್ಮೆ ತಮ್ಮ ನಾಲಿಗೆ ಸಡಿಲ ಮಾಡಿದ್ದಾರೆ. ಕರ್ನಾಟಕದವರು ತಮ್ಮ ಬೆನ್ನುಮೂಳೆ ಮುರಿದರೂ, ಹೊಗೇನಕಲ್ ಯೋಜನೆಯನ್ನು ಪೂರ್ಣಗೊಳಿಸಿಯೇ ಸಿದ್ಧ ಎಂಬ ಉಡಾಫೆಯ, ಪ್ರಚೋದಕ ಮಾತುಗಳನ್ನಾಡಿದ್ದಾರೆ. ಈ ಮಾತುಗಳ ಮೂಲಕ ಅವರು, ರಾಜಕೀಯದಲ್ಲಿ ಇಷ್ಟು ವರ್ಷ ಪಳಗಿಯೂ, ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ, ತಮ್ಮ ಸ್ಥಾನಕ್ಕೇ ಕಳಂಕ ತಂದುಕೊಂಡಿದ್ದಾರೆ.

ಕಾವೇರಿ ನದಿಯು ತಮಿಳುನಾಡನ್ನು ಪ್ರವೇಶಿಸುವ ತಾಣವಾದ ಕರ್ನಾಟಕದ ಹೊಗೇನಕಲ್‌ನಲ್ಲಿ ಜಲಾಶಯ ಕಟ್ಟಿ ತಮಿಳುನಾಡಿನ ಧರ್ಮಪುರಿ ಮತ್ತು ಕೃಷ್ಣಗಿರಿ ಪ್ರದೇಶಗಳಿಗೆ ನೀರುಣಿಸುವುದು ಡಿಎಂಕೆ ನೇತೃತ್ವದ ಸಮ್ಮಿಶ್ರ ಸರಕಾರದ ಯೋಜನೆ. ಇದು ಜಪಾನಿನ ಬ್ಯಾಂಕ್ ಆಫ್ ಇಂಟರ್‌ನ್ಯಾಷನಲ್ ಕೋಆಪರೇಶನ್ ಸಹಯೋಗದಲ್ಲಿ ತಮಿಳುನಾಡು ನಡೆಸುತ್ತಿರುವ 1334 ಕೋಟಿ ರೂ.ಗಳ ಯೋಜನೆಯೂ ಹೌದು. ಏನೇ ಆದರೂ ಇದನ್ನು ಪೂರ್ಣಗೊಳಿಸಿಯೇ ಸಿದ್ಧ ಎಂದಿದ್ದಾರೆ ಕರುಣಾನಿಧಿ.
ಏನಿದು ಹೊಗೇನಕಲ್ ಹೊಗೆ?
  1334 ಕೋಟಿ ರೂ.ಗಳ ಜಪಾನ್ ಸಹಯೋಗದ ಹೊಗೇನಕಲ್ ಯೋಜನೆಯು, ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ಬಂಜರುಪ್ರದೇಶದ 40.4 ಲಕ್ಷ ಜನರಿಗೆ ದಿನವೊಂದಕ್ಕೆ 160 ದಶಲಕ್ಷ ಲೀಟರ್ ನೀರು ವಿತರಿಸುವ ಉದ್ದೇಶ ಹೊಂದಿದೆ. ಜಪಾನ್ ಬ್ಯಾಂಕ್ ಫಾರ್ ಇಂಟರ್‌ನ್ಯಾಷನಲ್ ಕೋಆಪರೇಶನ್ ಇದಕ್ಕೆ ಸಹಕಾರ ನೀಡುತ್ತಿದೆ.      

ಹೊಗೇನಕಲ್ ಎಂಬುದು ಉಭಯ ರಾಜ್ಯಗಳ ನಡುವೆ ಇದ್ದ ಕಾವೇರಿ ವಿವಾದದ ಮತ್ತೊಂದು ಹೊರಳಿಕೆ. ಗಡಿಭಾಗದಲ್ಲಿರುವ ಹೊಗೇನಕಲ್ ಪ್ರದೇಶವು ತಮಿಳುನಾಡಿಗೆ ಸೇರಿದ್ದೋ, ಕರ್ನಾಟಕಕ್ಕೋ ಎಂಬ ಬಗೆಗಿದ್ದ ವಿವಾದವಿನ್ನೂ ಶಮನವಾಗಿಲ್ಲ. ಈ ಹಂತದಲ್ಲಿ ಕರುಣಾನಿಧಿ ಅತ್ಯಂತ ಕಟು ಶಬ್ದಗಳಲ್ಲಿ ಮಾತನಾಡುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ. "ಕರ್ನಾಟಕದ ಮಂದಿ ತಮಿಳುನಾಡು ಬಸ್ಸುಗಳನ್ನು ಮುರೀತಾರಂತೆ, ನಮ್ಮ ಬೆನ್ನೆಲುಬುಗಳನ್ನು ಮುರಿದರೂ ನಾವು ಬೆದರುವುದಿಲ್ಲ, ಯೋಜನೆ ಪೂರ್ಣಗೊಳಿಸಿಯೇ ಸಿದ್ಧ" ಎಂದಿದ್ದಾರವರು. ಮೌನವಾಗಿದ್ದುಕೊಂಡೇ ಯೋಜನೆಯ ಮುಂದುವರಿಕೆ ಬಗ್ಗೆ ಗಮನಿಸುತ್ತಿದ್ದ ಕರುಣಾನಿಧಿಯನ್ನು ಬಡಿದೆಬ್ಬಿಸಿರುವುದಕ್ಕೆ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಟೀಕೆಯೂ ಕಾರಣ. ಸರಕಾರ ಈ ಯೋಜನೆ ಬಗ್ಗೆ ಮೃದು ಧೋರಣೆ ತಳೆಯುತ್ತಿದೆ, ಹೊಗೇನಕಲ್ ತಮಿಳುನಾಡಿಗೆ ಸೇರಿದ್ದು, ಕರ್ನಾಟಕಕ್ಕೆ ಅದರ ಮೇಲೆ ಯಾವುದೇ ಅಧಿಕಾರ ಇಲ್ಲ ಎಂದು ಜಯಾ ಟೀಕಿಸಿದ್ದರು.

ಕಳೆದ ವಾರವಷ್ಟೇ ತಮಿಳುನಾಡು ವಿಧಾನಸಭೆಯಲ್ಲಿ ಈ ಕುರಿತು ಚರ್ಚೆ ನಡೆದು, ಯೋಜನೆ ವಿರುದ್ಧದ ಪ್ರತಿಭಟನೆ ನಿಲ್ಲಿಸುವಂತೆ ಕರ್ನಾಟಕಕ್ಕೆ ಸೂಚಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ನಿರ್ಣಯ ಮಂಡಿಸಿದ್ದ ಸ್ಥಳೀಯಾಡಳಿತ ಸಚಿವ ಎಂ.ಕೆ.ಸ್ಟಾಲಿನ್ (ಕರುಣಾನಿಧಿ ಪುತ್ರ) ಅವರು. ಈ ಯೋಜನೆಯಿಂದ ಕರ್ನಾಟಕಕ್ಕೆ ಯಾವುದೇ ಹಾನಿಯಿಲ್ಲ, ಕಾವೇರಿ ನದಿಯ ತಮಿಳುನಾಡಿನಲ್ಲಿ ಹರಿಯುವ ಭಾಗವನ್ನು ಮಾತ್ರವೇ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದರು.

ಆದರೆ ತಮಿಳುನಾಡು ಮುಖ್ಯ ಕಾರ್ಯದರ್ಶಿ ಎಲ್.ಕೆ.ತ್ರಿಪಾಠಿ ಅವರು ನೀಡಿರುವ ಹೇಳಿಕೆಯು ಕಳವಳಕಾರಿಯಾಗಿದೆ. ಅವರು ನೀಡಿರುವ ಹೇಳಿಕೆ ಪ್ರಕಾರ, ಹೊಗೇನಕಲ್ ಜಲ ವಿತರಣಾ ಯೋಜನೆಗೆ ಕರ್ನಾಟಕವು 1998ರಲ್ಲೇ ಅನುಮತಿ ನೀಡಿತ್ತು. ಅಂದಿನ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ 1998ರ ಜೂನ್ 29ರಂದು ನಡೆದ ಸಭೆಯಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿಯವರು ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಇತ್ತೀಚೆಗೆ, ರಾಷ್ಟ್ರಪತಿ ಆಳ್ವಿಕೆಯಡಿ ಇರುವ ಕರ್ನಾಟಕದ, ಹಾಲಿ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅವರು ತಮಿಳುನಾಡು ಮತ್ತು ಕೇಂದ್ರ ಸರಕಾರಕ್ಕೆ ಪತ್ರವೊಂದನ್ನು ಬರೆದು, ವಿವಾದ ಬಗೆಹರಿಯುವವರೆಗೂ ಯೋಜನೆ ಮುಂದುವರಿಸದಂತೆ ಕೋರಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ತ್ರಿಪಾಠಿ, ತಮ್ಮ ಕಡೆಯಿಂದ ಯಾವುದೇ ವಿವಾದ ಇಲ್ಲ ಎಂದಿದ್ದರಲ್ಲದೆ, ತಮಿಳುನಾಡು ತಮ್ಮ ಪಾಲಿಗೆ ದೊರೆತ ನೀರನ್ನಷ್ಟೇ ಬಳಸಿಕೊಳ್ಳುತ್ತದೆ ಎಂದಿದ್ದಾರೆ.

ಕರ್ನಾಟಕದಲ್ಲೀಗ ಚುನಾವಣೆಯ ಸಮಯ. ರಾಜಕೀಯ ಪಕ್ಷಗಳಂತೂ ಕನ್ನಡ ಮನಸುಗಳ ಗಮನ ಸೆಳೆಯಲು ಹೊಗೇನಕಲ್ ಘಟನೆಯನ್ನು ಅಸ್ತ್ರವಾಗಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ಏನೇ ಆದರೂ ಕರ್ನಾಟಕದ ಹಿತ ಕಾಯಲು ರಾಜಕೀಯ ಪಕ್ಷಗಳಿಗೆ ಇದೊಂದು ಅವಕಾಶ.

ಕಪ್ಪು ಕನ್ನಡಕದ ತಮಿಳು ಮುಖ್ಯಮಂತ್ರಿ ಹೇಳಿಕೆಯು ಸಹಜವಾಗಿ ಕನ್ನಡ ಪರ ಸಂಘಟನೆಗಳು ಮತ್ತು ಪಕ್ಷ ಭೇದವಿಲ್ಲದೆ ರಾಜ್ಯದ ರಾಜಕೀಯ ಪಕ್ಷಗಳನ್ನೂ ಬಡಿದೆಬ್ಬಿಸಿವೆ. ಆದರೆ ನಮ್ಮ ಸಂಸದರು ಮಾತ್ರ ಎಚ್ಚೆತ್ತುಕೊಳ್ಳಲು ಸಾಕಷ್ಟು ಕಾಲಾವಕಾಶ ಬೇಕೇನೋ...!

ಯೋಜನೆ ಬಗ್ಗೆ ಒಂದಿಷ್ಟು:
1334 ಕೋಟಿ ರೂ.ಗಳ ಜಪಾನ್ ಸಹಯೋಗದ ಹೊಗೇನಕಲ್ ಯೋಜನೆಯು, ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ಬಂಜರುಪ್ರದೇಶದ 40.4 ಲಕ್ಷ ಜನರಿಗೆ ದಿನವೊಂದಕ್ಕೆ 160 ದಶಲಕ್ಷ ಲೀಟರ್ ನೀರು ವಿತರಿಸುವ ಉದ್ದೇಶ ಹೊಂದಿದೆ. ಜಪಾನ್ ಬ್ಯಾಂಕ್ ಫಾರ್ ಇಂಟರ್‌ನ್ಯಾಷನಲ್ ಕೋಆಪರೇಶನ್ ಇದಕ್ಕೆ ಸಹಕಾರ ನೀಡುತ್ತಿದೆ. ಫೆಬ್ರವರಿ 26ರಂದು ಕರುಣಾನಿಧಿ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮಾರ್ಚ್ 16ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯೋಜನಾ ಪ್ರದೇಶಕ್ಕೆ ತೆರಳಿ ಅಲ್ಲಿ ಬಿಜೆಪಿ ವತಿಯಿಂದ ತಮಿಳುನಾಡು ಯೋಜನೆ ವಿರುದ್ಧ ಪ್ರತಿಭಟನೆ ಆಯೋಜಿಸಿದ್ದರು. ಮಾರ್ಚ್ 27ರಂದು ತಮಿಳುನಾಡು ವಿಧಾನಸಭೆಯು ನಿರ್ಣಯವೊಂದನ್ನು ಕೈಗೊಂಡು, ಯೋಜನೆಯ ಅನುಷ್ಠಾನಕ್ಕೆ ಕೇಂದ್ರದ ಸಂಪೂರ್ಣ ಸಹಕಾರ ಕೋರಿತ್ತಲ್ಲದೆ, ಕರ್ನಾಟಕಕ್ಕೆ ತಿಳಿಹೇಳುವಂತೆಯೂ ಕೇಳಿಕೊಂಡಿತ್ತು.
ಮತ್ತಷ್ಟು
ಕೊಂಚಕಾಲ ದೂರ ಇರಿ: ದಲ್ಲಾಳಿಗಳ ಸಲಹೆ
ರಾಜ್ಯ ರಾಜಕೀಯದಲ್ಲಿ 'ತ್ರಿಶಂಕು ಸ್ಥಿತಿ'
ದುರ್ಬಲವಾಗುತ್ತಿರುವ ಶೇರು ವ್ಯವಹಾರ
ತೆರಿಗೆ ಉಳಿತಾಯಕ್ಕೆ ಬಂಡವಾಳ ಹೂಡಿಕೆಯೇ ಪರಿಹಾರ
ಚುನಾವಣೆಯಲ್ಲಿ ಬಜೆಟ್ ಪರಿಣಾಮ
ವಾರದ ಸುದ್ದಿ ಸಾರ