ಕಟ್ಟುನಿಟ್ಟಿನ ಇಸ್ಲಾಮಿಕ್ ಕಾನೂನು ರೂಢಿಯಲ್ಲಿರುವ ಇಂಡೋನೇಶ್ಯಾದಲ್ಲಿ ಇನ್ಮುಂದೆ ಮಹಿಳೆಯರು ಬಿಗಿಯಾದ ಪ್ಯಾಂಟು ತೊಡುವಂತಿಲ್ಲ. ಅಲ್ಲಿ ಬಿಗಿ ಪ್ಯಾಂಟು ನಿಷೇಧಿಸುವ ಕಾಯ್ದೆ ಸದ್ಯವೇ ಜಾರಿಗೆ ಬರಲಿದ್ದು, ಕಾಯ್ದೆಯನ್ನು ಉಲ್ಲಂಘಿಸುವಂತವರಿಗೆ ಸೂಕ್ತ ಶಿಕ್ಷೆ ಕಾದಿದೆ.
ಇಂಡೋನೇಶ್ಯದಲ್ಲಿ ಅಚೆ ಪ್ರಾಂತ್ಯವು ಕಟ್ಟಾ ಮುಸ್ಲಿಂ ಸಂಪ್ರದಾಯಗಳನ್ನು ಪಾಲಿಸುವ ಪ್ರಾಂತ್ಯವಾಗಿದ್ದು, ಇಲ್ಲಿನ ಈ ಹಿಂದಿನ ಸರ್ಕಾರವು ವ್ಯಭಿಚಾರಿಗಳನ್ನು ಕಲ್ಲುಹೊಡೆದು ಸಾಯಿಸುವ ವಿವಾದಾಸ್ಪದ ಕಾನೂನನ್ನು ಅಂಗೀಕರಿಸಿತ್ತು.
ಮಹಿಳೆಯರು ಮುಸ್ಲಿಂ ಉಡುಪು ತೊಡುವಂತೆ ಒತ್ತಾಯಿಸುವ ಕಾನೂನುನ್ನು ಹೇರಲು ಪಶ್ಚಿಮ ಅಚೆಯ ರಾಜಪ್ರತಿನಿಧಿಯಾಗಿರುವ ರಾಮ್ಲಿ ಮನಸ್ಯೂರ್ ಅವರು ಯೋಜಿಸಿದ್ದು, ಈ ಕಾನೂನು ಡಿಸೆಂಬರ್‌ನಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.
ಕಾಲು ಮುಚ್ಚುವ ತನಕದ ಉದ್ದ ನಿಲುವಂಗಿ ಧರಿಸಿದರೆ ಮಹಿಳೆಯರು ಪ್ಯಾಂಟ್ ಧರಿಸಬಹುದಾಗಿದೆ. ಈಗೀಗ ಫ್ಯಾಶನ್‌ಗಳು ಮಿತಿಮೀರುತ್ತಿದ್ದು, ಇದು ತನಗೆ ಮುಜುಗರ ಹುಟ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.
ಒಂದೊಮ್ಮೆ ಈ ಕಾನೂನನ್ನು ಮಹಿಳೆಯರು ಉಲ್ಲಂಘಿಸಿದರೆ, ಅಂತಹವರು ಸರ್ಕಾರಿ ಕಚೇರಿಗಳಲ್ಲಿ ಸೇವೆಸಲ್ಲಿಸುವಂತಿಲ್ಲ ಮತ್ತು ಅಂತಹವರ ಪ್ಯಾಂಟುಗಳನ್ನು ನಾಶಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಹಿಳೆಯರು ಪ್ಯಾಂಟು ಧರಿಸಿ ಇನ್‌ಷರ್ಟ್ ಮಾಡಿದರೆ, ಅದು ತಪ್ಪು. ಆಕೆ ಸ್ಕಾರ್ಫ್ ಧರಿಸಿದ್ದರೂ, ಆಕೆಯ ಉಡುಪು ದೇಹದ ಆಕಾರವನ್ನು ತೋರುತ್ತದೆ, ಇದು ಸೂಕ್ತವಾದ ಮುಸ್ಲಿಂ ಉಡುಪು ಅಲ್ಲ ಎಂಬುದಾಗಿ ಶರಿಯಾದ ಮುಖ್ಯಸ್ಥ ನೂರ್ ಜನೇದ್ ಅವರೂ ಹೇಳಿದ್ದಾರೆ.