ಸಮಾಜದ ಸ್ವಾಸ್ಥ್ಯವನ್ನು ಕದಡುವ ಮತಾಂಧ ಕೋಮುವಾದಿಗಳಿಗೆ ಇದು ವಿಚಿತ್ರವಾಗಿ ಕಂಡರೂ ಇಂತಹುದ್ದೊಂದು ಉದಾಹರಣೆಯಿರುವುದು ನಿಜ. ಗೌತಮ ಬುದ್ಧನಿಗೆ ಜ್ಞಾನೋದಯವಾದ ನಾಡಿನಲ್ಲಿ ಮುಸ್ಲಿಮ್ ಸಂತನಿಗೆ ಗೋರಿ ಕಟ್ಟಿದ ಹಿಂದೂಗಳಿಗೆ, ಮುಸ್ಲಿಮರು ದೇವಸ್ಥಾನವನ್ನೇ ಕಟ್ಟುತ್ತಿದ್ದಾರೆ.
ಸುಮಾರು 30 ವರ್ಷಗಳ ಹಿಂದೆ ಬಿಹಾರದ ಬೆಗೂಸರಾಯ್ ಜಿಲ್ಲೆಯ ಕಡರಾಬಾದ್ ಗ್ರಾಮದಲ್ಲಿ ಮುಸ್ಲಿಮ್ ಸಂತನೊಬ್ಬನಿಗೆ ಗ್ರಾಮದ ಕೆಲ ಹಿಂದೂ ಜನ ಸೇರಿ ಸಮಾಧಿಯನ್ನು ಕಟ್ಟಿದ್ದರಂತೆ.
ಮೂರು ದಶಕಗಳ ಹಿಂದಿನ ನೆನಪನ್ನು ಮೆಲುಕು ಹಾಕುವ ಮತ್ತೊಂದು ಪ್ರಸಂಗಕ್ಕೆ ಇದೀಗ ಅದೇ ಗ್ರಾಮದ ಮುಸ್ಲಿಮರು ನಾಂದಿ ಹಾಡಿದ್ದಾರೆ. ಈ ಗ್ರಾಮದ ಮೊಹಮ್ಮದ್ ಫಕ್ರುಲ್ ಇಸ್ಲಾಮ್ ಎಂಬ ವ್ಯಕ್ತಿ 2,700 ಚದರ ಅಡಿ ಜಮೀನನ್ನು ಹಿಂದೂ ದೇವಳ ನಿರ್ಮಾಣಕ್ಕಾಗಿ ಬಿಟ್ಟುಕೊಟ್ಟಿದ್ದಾರೆ.
ಇದಕ್ಕೆ ಇತರ ಮುಸ್ಲಿಂ ಬಾಂಧವರು ಸಹಕಾರ ನೀಡುತ್ತಿದ್ದಾರೆ. ಮೊಹಮ್ಮದ್ ಹಶ್ರತ್ ಮತ್ತು ಮೊಹಮ್ಮದ್ ವಾಸಿ ಸೇರಿದಂತೆ ಗ್ರಾಮದ ಇತರ ಇಸ್ಲಾಂ ಧರ್ಮ ಪಾಲಕರು ಕಡರಾಬಾದ್ ಘಾಟ್ ಸಮೀಪ ದೇವಸ್ಥಾನ ಕಟ್ಟಲು ಆರಂಭಿಸಿದ್ದಾರೆ.
ಹಿಂದೂ ದೇವರಾದ ಶಿವನ ನೂತನ ದೇವಸ್ಥಾನಕ್ಕಾಗಿ ಮುಸ್ಲಿಮರಾದ ನಾವೇ ಭೂಮಿ ಪೂಜೆ ನಡೆಸಿದ್ದೇವೆ. ನಾವೇ ದೇವಸ್ಥಾನವನ್ನೂ ಕಟ್ಟುತ್ತೇವೆ. ಆ ಮೂಲಕ ಕೋಮು ಸೌಹಾರ್ದತೆಯ ಪ್ರಬಲ ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತೇವೆ ಎಂದು ವಾಸಿ, ಮತ್ತು ಹಶ್ರತ್ ಹೇಳುತ್ತಾರೆ.
ಇವರಲ್ಲೂ ಕೆಲ ಮುಸ್ಲಿಮ್ ಧರ್ಮಿಷ್ಠರು ದೇವಸ್ಥಾನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರಂತೆ. ಆದರೂ ಅದನ್ನೆಲ್ಲ ಲೆಕ್ಕಿಸದ ಒಂದು ಗುಂಪು ಮುಂದುವರಿದು ದೇವಸ್ಥಾನ ಕಟ್ಟುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗುತ್ತಿದ್ದಾರೆ ಎಂದು ಇಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.