ಮಹಾರಾಷ್ಟ್ರ ಏಕೀಕರಣ ಸಮಿತಿಯ(ಎಂಇಎಸ್)ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ಮರಾಠಿ ಮಹಾಮೇಳಕ್ಕೆ ಸರ್ಕಾರ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಅ.26ರಂದು ಮರಾಠಿ ಮಹಾಮೇಳ ನಡೆದರೆ ಬೆಳಗಾವಿ ರಣರಂಗವಾಗುತ್ತದೆ. ಅಲ್ಲಿ ರಕ್ತದೋಕುಳಿ ಹರಿಯುತ್ತದೆ. ಇದಕ್ಕೆಲ್ಲ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಕರವೇ ಸರ್ಕಾರಕ್ಕೆ ಗಂಭೀರವಾಗಿ ಎಚ್ಚರಿಕೆ ನೀಡಿದೆ.
ನೆರೆಯಿಂದ ರಾಜ್ಯದ ಜನತೆ ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಎಂಇಎಸ್ ಮರಾಠಿ ಮಹಾಮೇಳದ ಮೂಲಕ ತನ್ನ ರಾಜಕೀಯ ನೆಲೆ ವೃದ್ಧಿಸಿಕೊಳ್ಳಲು ಯತ್ನಿಸುತ್ತಿದೆ. ಬಿಜೆಪಿ ಸರ್ಕಾರ ಇಂತಹ ನಾಡದ್ರೋಹಿ ಕಾರ್ಯಚಟುವಟಿಕೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಆರೋಪಿಸಿದರು.
ಎಂಇಎಸ್ ಸದಸ್ಯರು ಗಡಿ ವಿಚಾರವಾಗಿ ವಿವಾದ ಸೃಷ್ಟಿಸುವತ್ತ ಗಡಿ ಭಾಗದ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಮರಾಠಿ ಮಹಾಮೇಳದ ಮೂಲಕ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಲು ಸಂಚು ರೂಪಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಗಳಿಸುವ ಉದ್ದೇಶಕ್ಕಾಗಿ ಬಿಜೆಪಿ ಸರ್ಕಾರ ಮರಾಠಿ ಮಹಾಮೇಳಕ್ಕೆ ಅನುಮತಿ ನೀಡಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ನಂತರ ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ವೇದಿಕೆಯ ಸದಸ್ಯರು, ಸರ್ಕಾರ ಇಂತಹ ನಾಡದ್ರೋಹಿ ಚಟುವಟಿಕೆಗೆ ಅವಕಾಶ ನೀಡಿದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ. ಮರಾಠಿ ಮಹಾಮೇಳ ನಡೆಯುವ ದಿನ ಸಮಾರಂಭಕ್ಕೆ ಅಡ್ಡಿಪಡಿಸುವುದಾಗಿ ಎಚ್ಚರಿಕೆ ನೀಡಿದರು. ಮಹಾಮೇಳಕ್ಕೆ ಅನುಮತಿ ನೀಡದಂತೆ ಕೋರಿ ಮನವಿ ಪತ್ರವನ್ನು ಸಲ್ಲಿಸಿದರು.