ಬಿಬಿಎಂಪಿ ಚುನಾವಣೆಯಲ್ಲಿ ಕೊಲೆ, ಸುಲಿಗೆಗಾರರಿಗೆ ಟಿಕೆಟ್ ನೀಡುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿಯೇ ಹೇಳಿಕೆ ನೀಡಿರುವ ಬೆನ್ನಲ್ಲೇ, ರೌಡಿ ಶೀಟರ್‌ನಲ್ಲಿರುವವರಿಗೆ ಟಿಕೆಟ್ ನೀಡುವ ಮೂಲಕ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಜೆಡಿಎಸ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಈಗಾಗಲೇ ಬಿಬಿಎಂಪಿಯ 150ವಾರ್ಡ್‌ಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್‌ನಲ್ಲಿ ಬಂಡಾಯದ ಕಹಳೆ ಮೊಳಗಿದೆ. ಬನಶಂಕರಿ ವಾರ್ಡ್‌ನಿಂದ ದಿವಾನ್ ಅಲಿಗೆ ಟಿಕೆಟ್ ನೀಡಲು ಜೆಡಿಎಸ್ ಮುಂದಾಗಿರುವುದು ಬಂಡಾಯಕ್ಕೆ ಎಡೆಮಾಡಿಕೊಟ್ಟಿದೆ.
ಸುಮಾರು 20ಕ್ಕೂ ಹೆಚ್ಚು ಮೊಕದ್ದಮೆಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿರುವ ದಿವಾನ್ ಅಲಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂದು ಬನಶಂಕರಿ ವಾರ್ಡ್‌ನ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಕೊಲೆ, ಸುಲಿಗೆ ಆರೋಪಗಳಿಗೆ ಗುರಿಯಾಗಿರುವ ದಿವಾನ್ ಅಲಿ ಬದಲು ಸೈಯದ್ ನಸಿರುದ್ದೀನ್‌ಗೆ ಟಿಕೆಟ್ ನೀಡಬೇಕೆಂಬುದು ಸ್ಥಳೀಯರ ಆಗ್ರಹ, ಸೈಯದ್ ನಸೀರುದ್ದೀನ್ ಅವರಿಗೆ ಟಿಕೆಟ್ ನೀಡಲು ವರಿಷ್ಠರು ನಿರ್ಧರಿಸಿದ್ದರು ಕೂಡ, ಶಾಸಕರೊಬ್ಬರ ಒತ್ತಡಕ್ಕೆ ಮಣಿದು ನಸೀರುದ್ದೀನ್ ಅವರಿಗೆ ಟಿಕೆಟ್ ತಪ್ಪಿಸುವುದು ಸರಿಯಲ್ಲ ಎಂದು ದೂರಿದ್ದಾರೆ.