ರಾಹುಲ್ ಮಹಾಜನ್ ಕೊನೆಗೂ ತಮ್ಮ ಎರಡನೇ ಬಾಳ ಸಂಗಾತಿಯನ್ನು ಟಿವಿ ಮೂಲಕ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರಾಖೀ ಕಾ ಸ್ವಯಂವರ್‌ನಲ್ಲಿ ರಾಖಿ ಕೇವಲ ನಿಶ್ಚಿತಾರ್ಥ ಮಾತ್ರ ಮಾಡಿಕೊಂಡರಾದರೂ, ರಾಹುಲ್ ದುಲ್ಹನಿಯಾ ಲೇ ಜಾಯೇಂಗೇ ಕಾರ್ಯಕ್ರಮದಲ್ಲಿ ತಮ್ಮ ಬಾಳ ಸಂಗಾತಿಗೆ ಹಾರ ಹಾಕಿದ ಮರುಕ್ಷಣವೇ ಶಾಸ್ತ್ರೋಕ್ತವಾಗಿ ಮದುವೆಯಾಗುವ ಮೂಲಕ ಹೊಸಬಾಳಿಗೆ ಕಾಲಿಟ್ಟಿದ್ದಾರೆ.
ಕೋಲ್ಕತ್ತಾ ಮೂಲದ ಚೆಲುವೆ ಡಿಂಪಿ ಗಂಗೂಲಿ ಸ್ವಯಂವರ ಸ್ವರ್ಧೆಯಲ್ಲಿ ರಾಹುಲ್ ಮಹಾಜನ್ ಅವರನ್ನು ಮೋಡಿ ಮಾಡಿ ಕೊನೆಯ ಹಂತದವರೆಗೂ ಆಯ್ಕೆಯಾಗುತ್ತಾ ಬಂದಿದ್ದರು. ಅಂತಿಮವಾಗಿ ಕಣದಲ್ಲಿದ್ದ ಮೂವರ ಪೈಕಿ ಡಿಂಪಿಯೇ ಕೊನೆಗೂ ರಾಹುಲ್ ಅವರ ಹೃದಯ ಕದ್ದ ಚೋರಿಯಾಗಿ ವಿಜಯ ಮಾಲೆ ಧರಿಸಿದರು.
ಮದುವೆಯ ಬಳಿಕ ಮಾತನಾಡಿದ ರಾಹುಲ್ ಮಹಾಜನ್, ತಾನು ಹಾಗೂ ಡಿಂಪಿ ಕೊನೆಯುಸಿರಿರುವರೆಗೂ ಜೊತೆಯಾಗಿ ಬಾಳ್ವೆ ನಡೆಸುತ್ತೇವೆ. ಮುಂಬೈನ ಬಾಂದ್ರಾದಲ್ಲಿ ನಾವಿಬ್ಬರೂ ರಿಜಿಸ್ಟರ್ ಮದುವೆಯನ್ನೂ ಆಗಲಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ನಾನೇನು ಮಾಡಿದರೂ ಮಾಧ್ಯಮದವರು ಆ ಸುದ್ದಿಯನ್ನು ಬಿತ್ತರಿಸುತ್ತಿದ್ದರು. ಆದರೆ ಈ ಬಾರಿ ನಾನೇ ನೇರವಾಗಿ ಮಾಧ್ಯಮದ ಸಹಾಯದಿಂದ ಮದುವೆಯಾಗಿದ್ದೇನೆ. ಡಿಂಪಿಯನ್ನು ಆಯ್ಕೆ ಮಾಡುವ ವಿಚಾರವನ್ನು ನಾನು ಮೊದಲೇ ನನ್ನ ಅಮ್ಮನಿಗೂ ತಿಳಿಸಿದ್ದೆ. ಆಕೆ ನನ್ನ ಆಯ್ಕೆಗೆ ಸಮ್ಮತಿ ಸೂಚಿಸಿದ್ದಳು. ಅಮ್ಮನಿಗೆ ನಾನು ಜೀವನದಲ್ಲಿ ಸಂತೋಷವಾಗಿರುವುದಷ್ಟೆ ಮುಖ್ಯ. ನಾನು ಜೀವನದಲ್ಲಿ ಎದುರಿಸಿದ ಸಂಕಷ್ಟಗಳೆಲ್ಲವೂ ಡಿಂಪಿಗೆ ಗೊತ್ತು. ಆಕೆಯ ಅಪ್ಪ ಆಕೆಗೆ ಆಶೀರ್ವಾದ ಮಾಡುವಾಗ, ನನ್ನ ಎಲ್ಲ ಕಷ್ಟ ಸುಖಗಳಲ್ಲೂ ಭಾಗವಹಿಸಬೇಕೆಂದು ಆಶಿರ್ವದಿಸಿದರು. ಇದು ನನ್ನ ಪಾಲಿಗೆ ತುಂಬ ಅವಿಸ್ಮರಣೀಯ ಕ್ಷಣ ಎಂದು ರಾಹುಲ್ ಭಾವುಕರಾಗಿ ನುಡಿದರು.
ರಾಖಿ ಹಾಗೂ ಇಳೇಶ್ ಅವರ ಟಿವಿ ಮದುವೆ ನಗೆಪಾಟಲಿನಲ್ಲಿ ಅಂತ್ಯವಾದುದನ್ನು ಉದಾಹರಿಸುತ್ತಾ, ಟಿವಿಯಲ್ಲಿ ಮದುವೆಯಾಗುವುದು ಕೇವಲ ಸಿನಿಕತನವೆಂಬ ಕೆಲವರ ಮಾತಿಗೆ ಉತ್ತರಿಸುತ್ತಾ, ನಾವಿಬ್ಬರೂ ಉತ್ತಮ, ಸಂಬಂಧಗಳನ್ನು ಗೌರವಿಸುವ ಸಾಂಪ್ರದಾಯಿಕ ಕುಟುಂಬಗಳಿಂದ ಬಂದವರು. ನಮ್ಮ ಸಂಬಂಧಗಳನ್ನು ಕೆಲವಕ್ಕಷ್ಟೇ ಸೀಮಿತಿಗೊಳಿಸುವುದು ನನ್ನ ಉದ್ದೇಶವಿಲ್ಲ. ನಾನು ಹಾಗೂ ಡಿಂಪಿ ಪರಸ್ಪರ ಇಷ್ಟಪಟ್ಟಿದ್ದೇವೆ. ಆಕೆಯ ಜೊತೆಗೆ ಜೀವನಪೂರ್ತಿ ಬಾಳುವ ಆಸೆ ನನ್ನದು ಎಂದು ಹೇಳಿದರು.
ಮದುವೆಯಾಯ್ತು, ಈಗ ಹನಿಮೂನ್: ಶಾಸ್ತ್ರೋಕ್ತವಾಗಿ ಮದುವೆಯಾಗಿರುವ ರಾಹುಲ್ ಹಾಗೂ ಡಿಂಪಿ ಸದ್ಯಕ್ಕೆ ಹನಿಮೂನ್ ಪ್ಲಾನ್ ಮಾಡುತ್ತಿದ್ದಾರೆ. ದೂರದ ವಿದೇಶ ಪ್ರಯಾಣ ರಾಹುಲ್ ಬಯಕೆಯಾದ್ರೂ, ಕಾನೂನು ಪ್ರಕರಣವೊಂದರ ಸಂದರ್ಭದ ಹಿನ್ನೆಲೆಯಲ್ಲಿ ಸದ್ಯಕ್ಕೆ ಅವರ ಪಾಸ್‌ಪೋರ್ಟ್ ಸರ್ಕಾರದ ವಶದಲ್ಲಿದೆ. ಹೀಗಾಗಿ ಅವರು ತಮ್ಮ ಪಾಸ್‌ಪೋರ್ಟ್ ವಾಪಸ್ ಪಡೆಯಲು ಭಾರೀ ಪ್ರಯತ್ನ ನಡೆಸುತ್ತಿದ್ದಾರೆ. ಇದೇ ವೇಳೆ ತಾವಿಬ್ಬರೂ ಹನಿಮೂನ್‌ಗಾಗಿ ಸದ್ಯ ಮಾಲ್ಡೀವ್ಸ್ ದ್ವೀಪಗಳಿಗೆ 2 ವಾರಗಳ ಕಾಲ ತೆರಳಿದ್ದೇವೆ ಎಂದು ತಿಳಿಸಿದ್ದಾರೆ.