ಚಿತ್ರ ಸೋತರೆ ಅದರ ಹೊಣೆ ಹೊರಲು ಯಾರೂ ಸಿದ್ಧರಿರುವುದಿಲ್ಲ. ಗೆಲುವಿಗೆ ಮಾತ್ರ ಎಲ್ಲರೂ ವಾರಸುದಾರರೇ! ಈ ಮಾತಿಗೆ ತಾಜಾ ನಿದರ್ಶನ ಎದ್ದೇಳು ಮಂಜುನಾಥ.
ಯಾವಾಗ ಎದ್ದೇಳು ಮಂಜುನಾಥ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಎಂದು ವರದಿಯಾಯಿತೋ, ಆಗಿನಿಂದಲೇ ಚಿತ್ರದ ಗೆಲುವಿಗೆ ನಾನೇ ಕಾರಣ ಎಂದು ನಿರ್ದೇಶಕ ಗುರುಪ್ರಸಾದ್ ಹೇಳಿದರೆ, ಇನ್ನೊಂದೆಡೆ ಇದಕ್ಕೆ ಪ್ರತ್ಯುತ್ತರವಾಗಿ ನಾಯಕನಿಲ್ಲದೆ ಯಾವ ಸಿನಿಮಾ ಓಡಿದೆ ಎನ್ನುತ್ತಿದ್ದಾರೆ ನಟ ಜಗ್ಗೇಶ್.
ಎದ್ದೇಳು ಮಂಜುನಾಥ ಚಿತ್ರ ಬಹಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ ಜಗ್ಗೇಶ್ ಅವರ ಚುನಾವಣಾ ಬ್ಯುಸಿಯಿಂದಾಗಿ ಚಿತ್ರ ಬಿಡುಗಡೆ ತಡವಾಯಿತು. ಈಗ ಜನ ಜಗ್ಗೇಶ್‌ರಿಂದಲೇ ಚಿತ್ರ ಗೆದ್ದಿತು ಎನ್ನುತ್ತಿದ್ದಾರೆ. ಮಠ ಚಿತ್ರದ ಬಳಿಕ ಒಂಭತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿಕ್ಕಪೇಟೆ ಸಾಚಾಗಳು ಕೂಡ ಸೋತಿದೆ. ಆದರೆ ಎದ್ದೇಳು ಮಂಜುನಾಥ ಮಾತ್ರ ಏಕೆ ಗೆದ್ದಿದೆ ಎಂದು ಪ್ರಶ್ನಿಸುತ್ತಾ ಚಿತ್ರದ ಗೆಲುವಿನ ರಹಸ್ಯ ಕೆದಕುತ್ತಾರೆ ನಿರ್ದೇಶಕ ಗುರುಪ್ರಸಾದ್.
ಆದರೆ ಜಗ್ಗೇಶ್ ಹೇಳುವುದಿಷ್ಟೇ. ಚಿತ್ರದ ಯಶಸ್ಸಿಗೆ ಪ್ರತಿಯೊಬ್ಬರೂ ಕಾರಣರಾಗುತ್ತಾರೆ. ನಾಯಕನೊಬ್ಬನಿಂದಲೇ ಸಿನಿಮಾ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಹಾಗೆಯೇ, ಯಾರು ನಿರ್ದೇಶಕನಿಂದ ಸಿನಿಮಾ ಗೆಲ್ಲುತ್ತದೆ ಎಂದು ಮಾತನಾಡುತ್ತಾರೋ ಅವರು ಮೂರ್ಖರು ಎಂದಿದ್ದಾರೆ ಜಗ್ಗೇಶ್.
ಇದೀಗ ಇವರಿಬ್ಬರ ಭಿನ್ನಭಿಪ್ರಾಯ ಶಮನವಾಗುವ ಲಕ್ಷಣವಂತೂ ಗೋಚರಿಸುತ್ತಿಲ್ಲ. ಮುಂದೆ ಜಗ್ಗೇಶ್ ಜೊತೆ ಸಿನಿಮಾ ಮಾಡುವುದಿಲ್ಲ ಎಂದು ಗುರುಪ್ರಸಾದ್ ಹೇಳಿದ್ದಾರೆ. ಒಟ್ಟಾರೆ, ಈ ಜಗಳದಿಂದ ಅವರಿಗೇ ನಷ್ಟವಾಗಿದೆ ಎಂದು ಹೇಳದೆ ವಿಧಿಯಿಲ್ಲ.