ಅಪ್ಪ ಮಗಳು ಜೊತೆಯಾಗಿ ನಟಿಸಿ ಸುದ್ದಿ ಮಾಡಿದ ಮುಸ್ಸಂಜೆ ಗೆಳತಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಇದರಿಂದ ಖುಷಿಯಾಗಿದ್ದಾರೆ ನಿರ್ದೇಶಕ ಬಿ.ಪಿ. ಶ್ರೀನಿವಾಸ್.
ಚಿತ್ರದಲ್ಲಿ ನಾಯಕ ಸಿಗರೇಟು ಸೇದುತ್ತಾರೆ. ಅದೊಂದು ಬಿಟ್ಟರೆ ಎಲ್ಲೂ ಅಸಂಬದ್ಧ ದೃಶ್ಯಗಳಾಗಲೀ, ಅಶ್ಲೀಲತೆಯಾಗಲೀ ಇಲ್ಲ. ಸೆನ್ಸಾರ್ ಮಂಡಳಿ, ಒಳ್ಳೆಯ ಚಿತ್ರ ಮಾಡಿದ್ದೀರಾ ಎಂದು ಬೆನ್ನುತಟ್ಟಿದ್ದಾರೆ ಎನ್ನುತ್ತಾರೆ ಶ್ರೀನಿವಾಸ್. ಅಲ್ಲದೆ, ಅಪ್ಪ- ಮಗಳು ಒಟ್ಟಿಗೆ ನಟಿಸುತ್ತಿರುವುದಕ್ಕೆ ಯಾವುದೇ ಬೇಜಾರಿಲ್ಲ. ಖುಷಿಯಿದೆ ಎನ್ನುತ್ತಾರೆ ಅವರು.
ಇದಕ್ಕೆ ಅವರು ಕೊಡುವ ನಿರ್ದೇಶನಗಳು ಹಲವು. ''ನಾವು ರಸ್ತೆಯಲ್ಲಿ ಓಡಾಡುತ್ತಿದ್ದರೆ, ಮುಸ್ಸಂಜೆಯ ಗೆಳತಿ ಹೀರೊ ಬರ್ತಾ ಇದ್ದಾರೆ. ಅದೇ ಕಣ್ರೋ. ಅಪ್ಪ ಮಗಳು ಹೀರೋ- ಹೀರೋಯಿನ್ ಆಗಿ ಮಾಡ್ತಾ ಇಲ್ವಾ, ಅದೇ ಫಿಲಂ ಕಣೋ'' ಎಂದು ಮಾತನಾಡಿಕೊಳ್ಳುವುದನ್ನು ಕೇಳಿದಾಗ ಸಖತ್ ಖುಷಿಯಾಗುತ್ತೆ ಎನ್ನುತ್ತಾರೆ ಶ್ರೀನಿವಾಸ್. ಚಿತ್ರವನ್ನು ಇವರೇ ನಿರ್ದೇಶಿಸಿ ನಾಯಕರಾಗಿದ್ದಾರೆ. ಮೊದಲ ಚಿತ್ರವಾದರೂ ಅಪ್ಪನ ನಿರ್ದೇಶನದಲ್ಲಿ ನಟಿಸುತ್ತಿರುವುದರಿಂದ ಕಷ್ಟವಾಗಲಿಲ್ಲ ಎನ್ನುತ್ತಾರೆ ನಾಯಕಿ ಶಾಲಿನಿ. ಒಟ್ಟಿನಲ್ಲಿ ಅಪ್ಪ ಮಗಳ ಜೋಡಿ ಬಗ್ಗೆ ಜನ ಏನು ಹೇಳುತ್ತಾರೋ ಕಾದು ನೋಡಬೇಕು.