ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಿಗ್ ಬಿ ಅತ್ಯುತ್ತಮ ನಟ, ಕನ್ನಡಕ್ಕೆ ಐದು ರಾಷ್ಟ್ರಪ್ರಶಸ್ತಿ (57th National Film Awards | Big B | Amitabh Bachchan | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
PR
2009ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 'ಸ್ವರ್ಣಕಮಲ' ಪ್ರಕಟವಾಗಿದ್ದು ಕನ್ನಡಿಗರು ಮತ್ತೆ ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಈ ಬಾರಿ ಕನ್ನಡಿಗರಿಗೆ ಎರಡು ಸ್ವರ್ಣ ಕಮಲ ಸೇರಿದಂತೆ ಒಟ್ಟು ಐದು ರಾಷ್ಟ್ರೀಯ ಪ್ರಶಸ್ತಿಗಳು ದೊರೆತಿರುವುದು ನಿಜಕ್ಕೂ ಕನ್ನಡಕ್ಕೆ, ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ನಿಜಕ್ಕೂ ಹೆಮ್ಮೆಯ ಸಂಗತಿ. ಕನ್ನಡದ ಪುಟಾಣಿ ಪಾರ್ಟಿ ಅತ್ಯುತ್ತಮ ಮಕ್ಕಳ ಚಿತ್ರವಾಗಿ ಗೆದ್ದರೆ, ಇನ್ನೊಂದೆಡೆ ಗಿರೀಶ್ ಕಾಸರವಳ್ಳಿ ಅವರ ಕನಸೆಂಬ ಕುದುರೆಯನೇರಿ ಚಿತ್ರಕ್ಕೆ ಎರಡೆರಡು ಪ್ರಶಸ್ತಿ ದೊರೆತಿದ್ದು ಕನ್ನಡದ ಸಿನಿಮಾ ಕ್ಷೇತ್ರದ ಕಿರೀಟಕ್ಕೆ ಇನ್ನಷ್ಟು ಗರಿಗಳು ಮೂಡಿವೆ. ಹಿಂದಿಯಲ್ಲಿ ಪಾ ಚಿತ್ರದಲ್ಲಿ ನಟಿಸುವ ಮೂಲಕ ಅರುಂಧತಿ ನಾಗ್ ಅತ್ಯುತ್ತಮ ಪೋಷಕ ನಟಿಯಾಗಿ ಪ್ರಶಸ್ತಿಗೆ ಭಾಜನರಾದರೆ, ಕೆ.ಪುಟ್ಟಸ್ವಾಮಿ ಅವರ ಸಿನಿಮಾಯಾನ ಪುಸ್ತಕಕ್ಕೆ ರಾಷ್ಟ್ರಪ್ರಶಸ್ತಿ ಸಂದಿದೆ.

ಈ ಬಾರಿ ಅತ್ಯುತ್ತಮ ಚಿತ್ರವಾಗಿ ಮಲಯಾಳಂ ಭಾಷೆಯ ಕುಟ್ಟಿ ಸ್ರಾಂಕ್ ಭಾಜನವಾಗಿದೆ. ಬದುಕಿದ್ದಾಗಲೇ ದಂತಕಥೆಯಾದ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಈ ಬಾರಿ ತಮ್ಮ ಪಾ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಪಾ ಚಿತ್ರದ ನಟನೆಗಾಗಿ ಸತತ ಮೂರನೇ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ಈ ಹಿಂದೆ ಅಗ್ನಿಪಥ್ ಮತ್ತು ಬ್ಲ್ಯಾಕ್ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದ ಅಮಿತಾಬ್ ಪ್ರತಿಭೆಗೆ ಹಿಡಿದ ಕನ್ನಡಿಯಿದು. ಅತ್ಯುತ್ತಮ ನಟಿಯಾಗಿ ಆಬೋಹಾಮನ್ ಚಿತ್ರದ ನಟನೆಗಾಗಿ ಅನನ್ಯ ಚಟರ್ಜಿ ಆಯ್ಕೆಯಾಗಿದ್ದಾರೆ. ಅದೇ ಚಿತ್ರದ ನಿರ್ದೇಶನಕ್ಕಾಗಿ ರಿತುಪರ್ಣೋ ಘೋಷ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗೆದ್ದಿದ್ದಾರೆ. ಅತ್ಯುತ್ತಮ ಪೋಷಕ ನಟಿಯಾಗಿ ಕನ್ನಡತಿ ಅರುಂಧತಿ ನಾಗ್ ಅವರು ತನ್ನ ಪಾ ಚಿತ್ರದ ನಟನೆಗಾಗಿ ದೊರೆತಿದೆ.
IFM


ಗಿರೀಶ್ ಕಾಸರವಳ್ಳಿ ನಿರ್ದೇಶನದ ಉಮಾಶ್ರೀ ಹಾಗೂ ಬಿರಾದರ್ ಅಭಿನಯದ ಕನಸೆಂಬ ಕುದುರೆಯನೇರಿ ಚಿತ್ರಕ್ಕೆ ಎರಡು ಪ್ರಶಸ್ತಿಗಳು ಸಂದಿವೆ. ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರವಾಗಿ ಹೊರಹೊಮ್ಮಿರುವ ಈ ಚಿತ್ರ ತನ್ನ ಶ್ರೇಷ್ಠ ಚಿತ್ರಕಥೆಗಾಗಿ ಅತ್ಯುತ್ತಮ ಚಿತ್ರಕಥೆ (ಸಾಧಾರ) ಪ್ರಶಸ್ತಿಯೂ ದೊರೆತಿದೆ. ಗೋಪಾಲಕೃಷ್ಣ ಪೈ ಹಾಗೂ ಗಿರೀಶ್ ಕಾಸರವಳ್ಳಿ ಈ ಚಿತ್ರದ ಚಿತ್ರಕಥೆ ಹೆಣೆದಿದ್ದರು, ಪ್ರಶಸ್ತಿ ದೊರೆತಿರುವ ಬಗ್ಗೆ ಗಿರೀಶ್ ಕಾಸರವಳ್ಳಿ ಸಂತಸ ವ್ಯಕ್ತಪಡಿಸಿದ್ದು, ಕನಸೆಂಬ ಕುದುರೆಯನೇರಿ ಚಿತ್ರ ಅತ್ಯಂತ ಸಂಕೀರ್ಣ ಕಥೆಯನ್ನು ಹೊಂದಿದೆ. ಅಮರೇಶ್ ನುಗಡೋಣಿ ಅವರ ಕಥೆಯನ್ನು ಆಧರಿಸಿ ಈ ಚಿತ್ರ ಮಾಡಿದ್ದು, ಇದರ ವ್ಯಾಪ್ತಿ ಅರ್ಥವಾಗುತ್ತೋ ಇಲ್ಲವೋ ಎಂಬ ಬಗ್ಗೆ ನನಗೆ ಗೊಂದಲವಿತ್ತು. ಆದರೆ ಪ್ರಶಸ್ತಿ ದೊರೆತಿದ್ದರ ಬಗ್ಗೆ ಖುಷಿಯಿದೆ. ಜೊತೆಗೆ ಈ ಬಾರಿ ಕನ್ನಡಕ್ಕೆ ಹಲವು ಪ್ರಶಸ್ತಿಗಳು ದಕ್ಕಿದ್ದು ಇದಕ್ಕಿಂತ ಹೆಚ್ಚು ಖುಷಿ ತಂದಿದೆ ಎಂದರು.

ಅರುಂಧತಿ ನಾಗ್ ಕೂಡಾ ತಮ್ಮ ಪ್ರಶಸ್ತಿಯ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ನನಗೆ ನಿಜಕ್ಕೂ ಖುಷಿಯಾಗುತ್ತಿದೆ. ಬಿಗ್ ಬಿ ಅವರಂಥ ಸೂಪರ್ ಸ್ಟಾರ್ ಜೊತೆ ನಟಿಸೋದು ಅತ್ಯಂತ ಖುಷಿಯ ಸಂಗತಿ. ನನಗೀ ಪ್ರಶಸ್ತಿಯಿಂದ ತುಂಬ ಸಂತೋಷವಾಗಿದೆ. ಜೊತೆಗೆ ನಾನು ಕನ್ನಡತಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.
IFM


ಅಮೀರ್ ಖಾನ್ ನಟನೆಯ ಭಾರೀ ಜನಪ್ರಿಯತೆ ಪಡೆದ ತ್ರಿ ಈಡಿಯಟ್ಸ್ ಕೂಡಾ ಮೂರು ಪ್ರಶಸ್ತಿ ಗೆದ್ದುಕೊಂಡಿದೆ. ಅತ್ಯುತ್ತಮ ಮನರಂಜನಾ ಚಿತ್ರ, ಅತ್ಯುತ್ತಮ ಸಾಹಿತ್ಯ ಹಾಗೂ ಅತ್ಯುತ್ತಮ ನಿರ್ಮಾಣಕ್ಕಾಗಿ ಇದು ಪ್ರಶಸ್ತಿ ಪಡೆದಿದೆ. ಕನ್ನಡದ ಪಿ.ಎನ್.ರಾಮಚಂದ್ರ ನಿರ್ದೇಶನದ ಪುಟಾಣಿ ಪಾರ್ಟಿ ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರವಾಗಿ ಹೊರಹೊಮ್ಮಿದ್ದು ವಿಶೇಷ. ಕಳೆಯ ವರ್ಷ ಅಭಯ ಸಿಂಹ ನಿರ್ದೇಶನದ ಗುಬ್ಬಚ್ಚಿಗಳು ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಸ್ವರ್ಣಕಮಲ ಪ್ರಶಸ್ತಿ ದಕ್ಕಿತ್ತು. ಈ ಬಾರಿಯೂ ಮತ್ತೆ ಮಕ್ಕಳ ಚಲನಚಿತ್ರವಾಗಿ ಕನ್ನಡ ಚಿತ್ರವೇ ಹೊರಹೊಮ್ಮಿದ್ದು ಗಮನಾರ್ಹ.

ಅತ್ಯುತ್ತಮ ಚಿತ್ರ- ಕುಟ್ಟಿ ಸ್ರಾಂಕ್ (ಮಲಯಾಳಂ)
ಅತ್ಯುತ್ತಮ ನಟ- ಅಮಿತಾಬ್ ಬಚ್ಚನ್ (ಪಾ)
ಅತ್ಯುತ್ತಮ ನಟಿ- ಅನನ್ಯ ಚಟರ್ಜಿ ( ಅಬೋಹಾಮನ್)
ಅತ್ಯುತ್ತಮ ನಿರ್ದೇಶಕ- ರಿತುಪರ್ಣೋ ಘೋಷ್ (ಆಬೋಹಾಮನ್)
ಅತ್ಯುತ್ತಮ ಮಕ್ಕಳ ಚಿತ್ರ- ಪುಟಾಣಿ ಪಾರ್ಟಿ (ಕನ್ನಡ) ಹಾಗೂ ಕೇಶು (ಮಲಯಾಳಂ)
ಅತ್ಯುತ್ತಮ ಹಿನ್ನೆಲೆ ಸಂಗೀತ- ಇಳೆಯರಾಜ (ಪಳಸಿರಾಜಾ)
ಅತ್ಯುತ್ತಮ ಸಂಭಾಷಣೆ- ಪಳನಿ ರಾಜ (ತಮಿಳಿನ ಪಸಂಗ ಚಿತ್ರಕ್ಕಾಗಿ)
ಅತ್ಯುತ್ತಮ ಪ್ರಾದೇಶಿಕ ಚಿತ್ರ- ಕನಸೆಂಬ ಕುದುರೆಯನೇರಿ (ನಿರ್ದೇಶಕ- ಗಿರೀಶ್ ಕಾಸರವಳ್ಳಿ)
ಅತ್ಯುತ್ತಮ ಸಾಧಾರ ಚಿತ್ರಕಥೆ (ಅಡಾಪ್ಟೆಡ್)- ಕನಸೆಂಬ ಕುದುರೆಯನೇರಿ
ಅತ್ಯುತ್ತಮ ಪೂರ್ಣ ಮನರಂಜನೆಯ ಜನಪ್ರಿಯ ಚಿತ್ರ- ತ್ರಿ ಈಡಿಯಟ್ಸ್
ಅತ್ಯುತ್ತಮ ಸಂಗೀತ ನಿರ್ದೇಶಕ- ಅಮಿತ್ ತ್ರಿವೇದಿ (ದೇವ್ ಡಿ ಚಿತ್ರಕ್ಕಾಗಿ)
ಅತ್ಯುತ್ತಮ ಸಾಹಿತ್ಯ- ಸ್ವಾನಂದ್ ಕಿರ್ಕೆರೆ (ತ್ರಿ ಈಡಿಯಟ್ಸ್‌ ಚಿತ್ರದ 'ಬೆಹ್ತಿ ಹವಾ ಸಾ..')
ಅತ್ಯುತ್ತಮ ನಿರ್ಮಾಣ- ತ್ರಿ ಈಡಿಯಟ್ಸ್
ಅತ್ಯುತ್ತಮ ಪೋಷಕ ನಟ- ಫಾರೂಕ್ ಶೇಖ್ (ಲಾಹೋರ್ ಚಿತ್ರಕ್ಕಾಗಿ)
ಅತ್ಯುತ್ತಮ ಪೋಷಕ ನಟಿ- ಅರುಂಧತಿ ನಾಗ್ (ಪಾ ಚಿತ್ರದ ನಟನೆಗೆ)
ಅತ್ಯುತ್ತಮ ಶಬ್ದಗ್ರಹಣ- ರೀಸಲ್ ಪೂಕುಟ್ಟಿ
ಅತ್ಯುತ್ತಮ ಸಾಮಾಜಿಕ ಸಂದೇಶವಿರುವ ಚಿತ್ರ- ವೆಲ್ ಡನ್ ಅಬ್ಬಾ (ನಿರ್ದೇಶನ- ಶ್ಯಾಂ ಬೆನಗಲ್)
ಅತ್ಯುತ್ತಮ ರಾಷ್ಟ್ರೀಯ ಏಕತೆ ಚಿತ್ರ- ಡೆಲ್ಲಿ 6
ಅತ್ಯುತ್ತಮ ಹಿಂದಿ ಚಿತ್ರ- ಪಾ
ಅತ್ಯುತ್ತಮ ಕೊರಿಯೋಗ್ರಫಿ- ಮಗಧೀರ (ತೆಲುಗು)
ಅತ್ಯುತ್ತಮ ಚೊಚ್ಚಲ ನಿರ್ದೇಶನ- ಸಂಜಯ್ ಸಿಂಗ್ ಪುರನ್ (ಚಿತ್ರ- ಲಾಹೋರ್)
ಅತ್ಯುತ್ತನ ಹಿನ್ನೆಲೆ ಗಾಯನ (ಪುರುಷರ ವಿಭಾಗ)- ರೂಪಮ್ ಇಸ್ಲಾಂ (ಚಿತ್ರ ಮಹಾನಗರ್)
ಅತ್ಯುತ್ತಮ ಹಿನ್ನೆಲೆ ಗಾಯನ (ಮಹಿಳೆಯರ ವಿಭಾಗ)- ನೀಲಾಂಜನ ಸರ್ಕಾರ್ (ಹೌಸ್‌ಪುಲ್)
ಅತ್ಯುತ್ತಮ ಸಿನೆಮಾಟೋಗ್ರಫಿ- ಅಂಜಲಿ ಶುಕ್ಲಾ
ಅತ್ಯುತ್ತಮ ಸಂಭಾಷಣೆ- ಪಳನಿರಾಜ
ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್- ಜಯಕುಮಾರ್ (ಕುಟ್ಟಿ ಸ್ರಾಂಕ್ ಚಿತ್ರಕ್ಕಾಗಿ)
ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್- ಆರ್. ಕಮಲ್ ಕಾನನ್
ಸಿನಿಮಾ ಕುರಿತ ಪುಸ್ತಕ ಪ್ರಶಸ್ತಿ- ಕನ್ನಡಿಗ ಕೆ.ಪುಟ್ಟಸ್ವಾಮಿ ಅವರು ಬರೆದ ಸಿನಿಮಾ ಯಾನ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮಿತಾಬ್ ಬಚ್ಚನ್, ಪಾ, ಕನ್ನಡ ಸಿನೆಮಾ, ಸ್ವರ್ಣಕಮಲ, 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಕನಸೆಂಬ ಕುದುರೆಯನೇರಿ, ಗಿರೀಶ್ ಕಾಸರವಳ್ಳಿ, ಪುಟಾಣಿ ಪಾರ್ಟಿ