ಮತ್ತೊಂದು ಮದುವೆನಾ?: 'ಇನ್ನೂ ಹೆಚ್ಚು ನಗ್ರೀ' ಅನ್ನೋ ದಿನೇಶ್‌ಬಾಬು
MOKSHA
ಎರಡನೇ ಮದುವೆ ಮಾಡಿರುವ ದಿನೇಶ್ ಬಾಬು ಇದೀಗ 'ಮತ್ತೊಂದ್ ಮದುವೇನಾ!'ಗೆ ಸಜ್ಜಾಗಿದ್ದಾರೆ. ಚಿತ್ರದ ಮುಹೂರ್ತವೂ ಯಶಸ್ವಿಯಾಗಿ ನೆರವೇರಿದೆ. ಹೌದು. ಎರಡನೇ ಮದುವೆಯ ಯಶಸ್ಸಿನ ಹುಮ್ಮಸ್ಸಿನಿಂದ ಹಾಗೂ ತಾನೂ ಎರಡನೇ ಮದುವೆಯಾದ ಖುಷಿಯಿಂದಲೋ ಏನೋ, ನಿರ್ದೇಶಕ ದಿನೇಶ್ ಬಾಬು ಸಕತ್ ಜೋಶ್‌ನಲ್ಲೇ ಮತ್ತೊಂದು ಮದುವೆನಾ ಚಿತ್ರದ ಸಮಾರಂಭದಲ್ಲಿ ಪಾಲ್ಗೊಂಡರು. ಇದೇ ಸಂದರ್ಭ ಚಿತ್ರೋದ್ಯಮದ ಹಲವು ಗಣ್ಯರು ಬಂದು ಶುಭ ಹಾರೈಸಿ ವಾಪಸಾದರು.
ಅಂದಹಾಗೆ, ಉಮೇಶ್ ಬಣಕಾರ್ ಅವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಬಹುತೇಕ ತಾರಾಗಣ ಹಿಂದಿನಂತೆ ಇರಲಿದೆಯಂತೆ. ಆದರೆ, ನಟ ಪ್ರೇಮ್ ಇಲ್ಲಿ ಇರುವುದಿಲ್ಲ. ಜೆನ್ನಿಫರ್ ಕೊತ್ವಾಲ್ ಉಳಿದುಕೊಂಡಿದ್ದಾರೆ. ಉಳಿದಂತೆ ಅನಂತನಾಗ್- ಸುಹಾಸಿನಿ, ತಾರಾ -ಶರಣ್ ಜೋಡಿಯ ಜೊತೆ ಹೊಸದಾಗಿ ನವೀನ್ ಕೃಷ್ಣ- ಪ್ರಿಯಾಂಕ ಸೇರ್ಪಡೆಯಾಗದ್ದಾರಂತೆ. ಹಿಂದಿನ ಚಿತ್ರಕ್ಕಿಂತ ಇಲ್ಲಿ ವಿಷಯ ವಸ್ತು ಒಂದಿಷ್ಟು ಗಂಭೀರವಾಗಲಿದೆಯಂತೆ. ಆದರೆ ಅದಕ್ಕೆ ಹಾಸ್ಯದ ಟಚ್ ನೀಡಿ ನಗಿಸುವುದು ನಿರ್ದೇಶಕರ ಉದ್ದೇಶ.
ಈ ಬಾರಿ ಚಿತ್ರದಲ್ಲಿ ಶ್ರೀನಿವಾಸ್ ಮೂರ್ತಿ, ಎಂ.ಎಸ್. ಉಮೇಶ್, ರಾಜು ತಾಳಿಕೋಟೆ ಎಲ್ಲಾ ಇರ್ತಾರಂತೆ. ಸಿನಿಮಾದ ಕಥೆ, ಚಿತ್ರಕಥೆ, ನಿರ್ದೇಶನ ದಿನೇಶ್ ಬಾಬು ಅವರದ್ದು. ಇವರ ಎರಡನೇ ಮದುವೆ ಚಿತ್ರದ ಕೊನೆಯಲ್ಲಿ ಇನ್ನೊಂದು ಚಿತ್ರ ಮಾಡುವ ಎಳೆ ಬಿಟ್ಟು ಮುಗಿಸಿದ್ದೆ. ಈಗ ಅದೇ ಎಳೆಯನ್ನು ಆಧರಿಸಿ ಚಿತ್ರ ಮುಂದುವರಿಸುತ್ತೇನೆ ಎನ್ನುತ್ತಾರೆ ದಿನೇಶ್ ಬಾಬು.
ಎರಡನೇ ಮದುವೆಯಲ್ಲಿ ನಕ್ಕಿದ್ದಕ್ಕಿಂತ ಹೆಚ್ಚು ನಗುವ ಅವಕಾಶ ಇಲ್ಲಿ ಇರಲಿದೆಯಂತೆ. ಒಟ್ಟಾರೆ ಇನ್ನೊಮ್ಮೆ ನಗುವ ಅವಕಾಶ ಕಲ್ಪಿಸುತ್ತಿರುವ ದಿನೇಶ್ ಬಾಬು ಅವರಿಗೆ ಧನ್ಯವಾದ ಅನ್ನಬಹುದು. ಚಿತ್ರವೂ ಕೇವಲ 15 ದಿನಗಳ ಒಂದು ಹಂತದ ಚಿತ್ರೀಕರಣದಲ್ಲಿಯೇ ಸಿದ್ಧವಾಗಲಿದೆಯಂತೆ. ಹೀಗಾಗಿ ಅತಿಬೇಗ ಚಿತ್ರಮಂದಿರದಲ್ಲಿ ಇದನ್ನು ನಿರೀಕ್ಷಿಸಬಹುದು. ಆದರೆ ಎರಡನೇ ಮದುವೆಯ ಯಶಸ್ಸಿನ ಮೆರುಗಿನಲ್ಲಿ ಈ ಚಿತ್ರ ಸೊರಗದಿರಲಿ ಎಂದೇ ಹಾರೈಸೋಣ.