ಸಿನಿಮಾದಲ್ಲಿ ಹೀರೋ ಆಗಬೇಕೆಂದು ಯಾರಿಗೆ ತಾನೇ ಆಸೆ ಇರೋದಿಲ್ಲ. ನಾಯಕ ಸುಂದರವಾಗಿರಬೇಕು ಎಂಬ ಕಲ್ಪನೆಯೂ ಈಗ ಬಹುತೇಕ ಹೊರಟು ಹೋಗಿದೆ. ಬ್ಯಾಂಕಿನಲ್ಲಿ ಹಣ, ಬೆನ್ನಿಗೆ ಅದೃಷ್ಟವಿದ್ದರೆ ಸಾಕು. ಬಹುತೇಕ ಕನ್ನಡ ಚಿತ್ರರಂಗದ ಪ್ರಸಕ್ತ ಹೀರೋಗಳನ್ನು ನೋಡಿದಾಗ ಎದ್ದು ಕಾಣುವ ವಿಚಾರವಿದು.
ಇಂತಹ ಪರಿಸ್ಥಿತಿಯಲ್ಲಿ ಸುಂದರಾಂಗ ಮಧು ಬಂಗಾರಪ್ಪ ನಾಯಕನಾಗಲು ಹೊರಟಿರುವುದರಲ್ಲಿ ಯಾವುದೇ ಅತಿಶಯವಿಲ್ಲ. ಈಗಾಗಲೇ ಕೆಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡವರಿಗೆ ಅಭಿನಯ ಕಷ್ಟವಾಗದು. ಇದುವರೆಗೆ ಚಿತ್ರ ನಿರ್ಮಿಸುತ್ತಾ, ತನ್ನ ಆಕಾಶ್ ಆಡಿಯೋ ಮೂಲಕ ಧ್ವನಿಸುರುಳಿ ಕಂಪನಿ ನಡೆಸುತ್ತಿದ್ದ ಮಧು ಇನ್ನು ಹೀರೋ.
ಇದಕ್ಕೆ ನಾಯಕಿಯಾಗುತ್ತಿರುವವರು ಕರ್ನಾಟಕದ ಹುಡುಗಿ ಮಂಗಳೂರಿನ ಸ್ನೇಹಾ ಉಳ್ಳಾಲ್. ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಈ ಹಿಂದೆ ಹಲವು ಬಾರಿ ಸುದ್ದಿ ಮಾಡಿದ್ದ ಸ್ನೇಹಾ ಈ ಬಾರಿ ನಟಿಸುವುದು ಖಚಿತ. ಶೀಘ್ರದಲ್ಲೇ ಚಿತ್ರೀಕರಣವೂ ಆರಂಭವಾಗುತ್ತದೆ.
'ದೇವಿ' ಎಂದು ಹೆಸರಿಡಲಾಗಿರುವ ಚಿತ್ರದ ನಿರ್ದೇಶನ ಹೊಣೆ ಹೊತ್ತಿರುವುದು ಈಶ್ವರ್ ಬಾಳೆಗುಂಡಿ. ವಿ. ಶ್ರೀಧರ್ ಎಂಬವರು ಸಂಗೀತ ನೀಡುತ್ತಿದ್ದಾರೆ. ಸುರೇಶ್ ಬಾಬು ಕ್ಯಾಮರಾ ಹಿಡಿಯಲಿದ್ದಾರೆ.
IFM
ಇದು ಬಹಿರಂಗವಾದದ್ದು ಉಪೇಂದ್ರರ 'ಸೂಪರ್' ಆಡಿಯೋ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ. ನವೆಂಬರ್ 28ರ ಭಾನುವಾರ ರಾತ್ರಿ ಮಾತನಾಡುತ್ತಾ, ಮಧು ಬಂಗಾರಪ್ಪ ನಾಯಕನಾಗುತ್ತಿರುವುದನ್ನು ಹೇಳಿಬಿಟ್ಟರು.
ನಂತರ ಬಚ್ಚಿಡುವುದು ವ್ಯರ್ಥ ಎಂದುಕೊಂಡ ಮಧು, ತಾನು ನಾಯಕನಾಗುತ್ತಿರುವುದು ಹೌದು; ಇದನ್ನು ಬೇರೆ ವೇದಿಕೆಯಲ್ಲಿ ಪ್ರಕಟಿಸಬೇಕೆಂದಿದ್ದೆ. ಆದರೆ ಉಪೇಂದ್ರ ಬಹಿರಂಗ ಪಡಿಸಿ ಆಗಿದೆ. ಇನ್ನೇನು ಮಾಡುವಂತಿಲ್ಲ ಎಂದು ಕೈಕೈ ಹಿಸುಕಿಕೊಂಡರು.
ಚಿತ್ರದ ಹೆಸರು ದೇವಿ ಎಂದ ಕೂಡಲೇ ಇದು ಭಕ್ತಿ ಪ್ರಧಾನ ಚಿತ್ರ ಅಂದುಕೊಳ್ಳಬೇಕಿಲ್ಲ. ಪಕ್ಕಾ ಮಾಸ್ ಸಿನಿಮಾ. ಲವ್-ಸೆಂಟಿಮೆಂಟ್ ಇದ್ದೇ ಇರುತ್ತದೆ. ಇನ್ನೊಬ್ಬ ನಾಯಕಿಯೂ ಚಿತ್ರದಲ್ಲಿರುತ್ತಾಳೆ.
ರವಿಕಾಳೆ, ಬುಲೆಟ್ ಪ್ರಕಾಶ್, ಮುನಿ, ಲಕ್ಷ್ಮಿ ಮುಂತಾದವರು ನಟಿಸಲಿರುವ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮಳವಳ್ಳಿ ಸಾಯಿಕೃಷ್ಣರೂ ನಟಿಸುತ್ತಾರೆ.