ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಪ್ಪಿ ನಮ್ಮ ಗುರು, ನಾನು ಅವರ ಫ್ಯಾನ್: ಯೋಗರಾಜ್ ಭಟ್ (Super | Upendra | Rockline Venkatesh | Nayantara)
ಸುದ್ದಿ/ಗಾಸಿಪ್
Bookmark and Share Feedback Print
 
ಇದು ಭಾನುವಾರ (ನವೆಂಬರ್ 28) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 'ಸೂಪರ್' ಚಿತ್ರದ ಸಮಾರಂಭದಲ್ಲಿ 'ಮಳೆ' ಮಾಂತ್ರಿಕ ಯೋಗರಾಜ್ ಭಟ್ ಹೇಳಿರುವ ಮಾತು.

ಸೂಪರ್ ಚಿತ್ರಕ್ಕಾಗಿ ಹಾಡೊಂದನ್ನು (ಸಿಕ್ಕಾಪಟ್ಟೆ ಇಷ್ಟಪಟ್ಟೆ) ಬರೆದಿರುವ ಭಟ್ರನ್ನು ಉಪೇಂದ್ರ ಶ್ಲಾಘಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, 'ನಾವೆಲ್ಲ ಉಪ್ಪಿ ಸರ್ ಹಾದಿಯನ್ನು ಅನುಸರಿಸುತ್ತಿದ್ದೇವೆ. ಕಳೆದ ಹತ್ತು ವರ್ಷಗಳಿಂದ ನಾನು ಮತ್ತು ಇತರ ನಿರ್ದೇಶಕರು ಉಪೇಂದ್ರ ಟೋಪಿಯನ್ನು ಹಾಕುತ್ತಿದ್ದೇವೆ. ಅವರು ನಮ್ಮ ಗುರು. ನಾನು ಅವರ ದೊಡ್ಡ ಅಭಿಮಾನಿ' ಎಂದರು.
PR

ಈ ಆಡಿಯೋ ಬಿಡುಗಡೆ ಅಧಿಕೃತ ಕಾರ್ಯಕ್ರಮವನ್ನು ಆಕಾಶ್ ಆಡಿಯೋ ಮಾಲೀಕ ಮಧು ಬಂಗಾರಪ್ಪ ಆಯೋಜಿಸಿದ್ದರು. ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿದ್ದ ಸಮಾರಂಭ ವರ್ಣರಂಜಿತವಾಗಿತ್ತು. ಉಪ್ಪಿ ಕೆಲವೊಂದು ಡೈಲಾಗ್‌ಗಳನ್ನು ಹೇಳಿ, ಹಾಡುಗಳಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮ ರಾತ್ರಿ ಏಳು ಗಂಟೆಗೆ ಆರಂಭವಾಗಿತ್ತು. ಆದರೆ ಸಂಜೆ ಹೊತ್ತಿಗೆ ಸಾವಿರಾರು ಸಂಖ್ಯೆಯಲ್ಲಿ ಉಪ್ಪಿ ಅಭಿಮಾನಿಗಳು ಜಮಾಗೊಂಡಿದ್ದರು. ಗಾಯಕ ಹೇಮಂತ್ ಕುಮಾರ್ 'ಪ್ರೀತ್ಸೆ ಪ್ರೀತ್ಸೆ' ಹಾಡನ್ನು ಹಾಡುತ್ತಿದ್ದಂತೆ ಆನಂದತುಂದಿಲರಾದ ಪ್ರೇಕ್ಷಕರು, ನಂತರ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಕಾರ್ಯಕ್ರಮ, ರುಚಿಕಾ ಸಿಂಗ್ ನೃತ್ಯಕ್ಕೂ ತಲೆದೂಗಿದರು.

'ಐ ಲೈಕ್ ಇಟ್' ಎಂದು ಹೇಳುತ್ತಾ ಉಪೇಂದ್ರ ತನ್ನ ಪತ್ನಿ ಪ್ರಿಯಾಂಕಾ, ಪುತ್ರ ಆಯುಷ್, ಪುತ್ರಿ ಐಶ್ವರ್ಯಾ ಜತೆ ವೇದಿಕೆಗೆ ಬಂದರು. ಇವರಿಗೆ ಸಾಥ್ ನೀಡಿದ್ದು ಸಂಗೀತ ನಿರ್ದೇಶಕ ಹರಿಕೃಷ್ಣ, ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ಮಧು ಬಂಗಾರಪ್ಪ.

ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಉಪೇಂದ್ರ, 'ಸೂಪರ್ ಆಡಿಯೋಗೆ ಸಿಕ್ಕಿರುವ ಪ್ರತಿಕ್ರಿಯೆ ನನ್ನನ್ನು ಅಚ್ಚರಿಯಲ್ಲಿ ಕೆಡವಿದೆ. ನನ್ನನ್ನು ಹಾರೈಸಲು ಇಲ್ಲಿಯವರೆಗೆ ಬಂದಿರುವ ಅಭಿಮಾನಿಗಳಿಗೆ ನಾನು ಋಣಿಯಾಗಿದ್ದೇನೆ. ಸಿನಿಮಾಕ್ಕೆ 'ಸೂಪರ್' ಎಂಬ ಶೀರ್ಷಿಕೆಯನ್ನು ನೀಡಿದ್ದೇ ಅಭಿಮಾನಿಗಳು. ಚಿತ್ರವನ್ನು ಸೂಪರ್ ಹಿಟ್ ಮಾಡುವುದು ಕೂಡ ಅವರಿಗೆ ಬಿಟ್ಟದ್ದು' ಎಂದರು.

ಚಿತ್ರಕ್ಕೆ ಮಟ್ಟುಗಳನ್ನು ಹಾಕಿರುವ ಸಂಗೀತ ನಿರ್ದೇಶಕರ ತಂಡದ ಶ್ರಮವನ್ನೂ ಉಪ್ಪಿ ಇದೇ ಸಂದರ್ಭದಲ್ಲಿ ನೆನೆದರು. ನನಗೆ ಅತ್ಯುತ್ತಮ ತಂಡ ಸಿಕ್ಕಿದೆ. ಕಳೆದ 10 ವರ್ಷಗಳಿಂದ ನನಗೆ ಹರಿಕೃಷ್ಣ ಪರಿಚಿತರು. ಅವರು ಕೆಲವು ಅದ್ಭುತ ಟ್ಯೂನ್‌ಗಳನ್ನು ನೀಡಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಹರಿಕೃಷ್ಣ, 'ಉಪ್ಪಿ ಸಾರ್ ಜತೆ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅವರು ನನ್ನನ್ನು ಸಂಪರ್ಕಿಸಿದ ನಂತರ ನಾನು ಕೆಲವೊಂದು ಟ್ಯೂನ್‌ಗಳನ್ನು ನೀಡಿದ್ದೆ, ಅದನ್ನೇ ಅವರು ಒಪ್ಪಿಕೊಂಡಿದ್ದರು. ನನಗಂತೂ ಶಾಲೆಗೆ ಹೋದ ಅನುಭವವಾಗಿದೆ' ಎಂದರು.
PR

ಹೊಗಳಿಕೆಯಿಂದ ವಿ. ಮನೋಹರ್ ಕೂಡ ಹೊರತಾಗಿರಲಿಲ್ಲ. 'ಉಪ್ಪಿ ನನ್ನನ್ನು ಅಣ್ಣಾ ಎಂದೇ ಕರೆಯುತ್ತಾನೆ. ಆತನ ಚಿತ್ರರಂಗದ ಆರಂಭದ ದಿನಗಳಲ್ಲಿ ನಾನು ಸಹಾಯ ಮಾಡಿದ್ದನ್ನು ಯಾವತ್ತೂ ಹೇಳುತ್ತಿರುತ್ತಾನೆ. ಆದರೆ ನಿಜಕ್ಕೂ ಅದು ನಾನಲ್ಲ, ಆತ. ತರ್ಲೆ ನನ್ಮಗ ಚಿತ್ರದ ಮೂಲಕ ನನಗೆ ಬ್ರೇಕ್ ನೀಡಿದ್ದು ಉಪ್ಪಿ' ಎಂದರು.

150 ಥಿಯೇಟರುಗಳಲ್ಲಿ ಬಿಡುಗಡೆ...
ನಯನತಾರಾ ಮತ್ತು ತುಲಿಪ್ ಜೋಶಿ ನಾಯಕಿಯರಾಗಿರುವ ಸೂಪರ್ ಚಿತ್ರ ಕರ್ನಾಟಕದಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಡಿಸೆಂಬರ್ 3ರಂದು ಬಿಡುಗಡೆಯಾಗುತ್ತಿದೆ.

ವರದಿಗಳ ಪ್ರಕಾರ ನಿರ್ಮಾಪಕ ರಾಕ್‌ಲೈನ್ ಬೆಂಗಳೂರಿನ ವಿತರಣಾ ಹಕ್ಕುಗಳನ್ನು 4.5 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

ಇತರ ಯಾವುದೇ ಕೇಂದ್ರಗಳ ಹಕ್ಕುಗಳನ್ನು ರಾಕ್‌ಲೈನ್ ಮಾರಾಟ ಮಾಡಿಲ್ಲ. ಆದರೆ ಮಾರಾಟ ಮಾಡುವಂತೆ ಒತ್ತಡಗಳು ಹೆಚ್ಚುತ್ತಿರುವುದರಿಂದ ಶೀಘ್ರದಲ್ಲೇ ಈ ಕುರಿತು ನಿರ್ಧಾರ ಕೈಗೊಳ್ಳುವ ಬಗ್ಗೆ ನಿರ್ಮಾಪಕರು ಯೋಚಿಸುತ್ತಿದ್ದಾರೆ.

ಅಂದ ಹಾಗೆ ಡಿಸೆಂಬರ್ 3ರಂದು ತೆಲುಗು ಅವತರಣಿಕೆಯು ಬಿಡುಗಡೆಯಾಗುತ್ತಿಲ್ಲ. ಕನ್ನಡದಲ್ಲಿ ಬಿಡುಗಡೆಯಾದ ಎರಡು-ಮೂರು ವಾರಗಳ ನಂತರವಷ್ಟೇ ಬಿಡುಗಡೆಯಾಗಬಹುದು. ನಿರ್ಮಾಪಕ ಅಶ್ವಿನಿ ದತ್ ಮತ್ತು ಸುರೇಶ್ ಮುಂತಾದವರು ಆಂಧ್ರಪ್ರದೇಶದಲ್ಲಿ ತೆಲುಗು ಆವೃತ್ತಿ ಬಿಡುಗಡೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಎಲ್ಲವೂ ಯಶಸ್ವಿಯಾದರೆ ಡಿಸೆಂಬರ್ 3ರಂದು ಏಕಕಾಲದಲ್ಲಿ ಕನ್ನಡ-ತೆಲುಗು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕಲಾಗಿಲ್ಲ. ತೆಲುಗು ಆವೃತ್ತಿಯನ್ನು ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮತ್ತು ಅಮೆರಿಕಾಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಕನ್ನಡವನ್ನು ಹೊರನಾಡಿನಲ್ಲಿ ಬಿಡುಗಡೆ ಮಾಡುವ ಕುರಿತು ಯಾವುದೇ ಮಾಹಿತಿಯನ್ನು ಇದುವರೆಗೆ ಬಹಿರಂಗಪಡಿಸಲಾಗಿಲ್ಲ.

ಸೂಪರ್ ಪ್ರೊಮೋ ಬಿಡುಗಡೆ...
ಸೂಪರ್ ಚಿತ್ರದ ಕುರಿತು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಎಡೆ ಮಾಡಿರುವ ನಡುವೆಯೇ ಚಿತ್ರತಂಡ ಪ್ರೊಮೋ ಬಿಡುಗಡೆ ಮಾಡಿದೆ. ಆದರೆ ಈ ಪ್ರೊಮೋದಲ್ಲಿಯೂ ಚಿತ್ರದ ಕುರಿತು ಯಾವುದೇ ಎಳೆಯನ್ನು ಬಿಟ್ಟುಕೊಡಲಾಗಿಲ್ಲ. ಆ ರೀತಿಯಲ್ಲಿ ವಿಶಿಷ್ಟವಾಗಿ ನಿರ್ಮಿಸಲಾಗಿದೆ.

ಚಿತ್ರದ ಟ್ರೇಲರ್‌ಗಳು ಈಗಾಗಲೇ ಹಲವು ವಾಹಿನಿಗಳಲ್ಲಿ ಪ್ರಸಾರ ಕಂಡಿದೆ. ಯಾವುದೇ ಒಂದು ಡೈಲಾಗ್ ಪೂರ್ತಿ ಕೇಳಲು ಅಥವಾ ಯಾವುದೇ ದೃಶ್ಯವನ್ನು ಸರಿಯಾಗಿ ನೋಡಲು ಅವಕಾಶ ನೀಡದೆ ಇರುವ ಮೂಲಕ ಮತ್ತಷ್ಟು ಕುತೂಹಲವನ್ನು ಕೆರಳಿಸಲಾಗಿದೆ.

ಕಥೆಗೆ ವ್ಯಥೆ, ಚಿತ್ರಕಥೆಗೆ ವಿಚಿತ್ರ ವ್ಯಥೆ, ನಿರ್ದೇಶನಕ್ಕೆ ನಿರುದ್ದೇಶ ಹೀಗೆ ವಿಚಿತ್ರ ಶೀರ್ಷಿಕೆಗಳನ್ನೂ ನೀಡಲಾಗಿದೆ.

ಸಂಬಂಧಪಟ್ಟ ಸುದ್ದಿಗಳು:
** ಉಪ್ಪಿ 'ಸೂಪರ್' ಡಿ.3ಕ್ಕೆ ತೆರೆಗೆ; ಇಲ್ಲಿದೆ ಫೋಟೋ ಗ್ಯಾಲರಿ
** ನಕಲಿ ಆಡಿಯೋ ವಿರುದ್ಧ ಉಪೇಂದ್ರ 'ಸೂಪರ್' ಹೋರಾಟ
** ಉಪ್ಪಿ ನಿರ್ದೇಶನದಲ್ಲಿ ಪುನೀತ್; ಪಾರ್ವತಮ್ಮ ಏನಂತಾರೆ?
** ನಾನು ಮಾಡುವುದು ಪ್ರಯೋಗ, ಗಿಮಿಕ್ ಅಲ್ಲ: ಉಪೇಂದ್ರ
** ಉಪೇಂದ್ರ ಆಡಿಯೋ ಬಿಡುಗಡೆಯಲ್ಲಿ 'ಸೂಪರ್' ಡ್ರಾಮಾ
** ಟೇಕ್‌ಗೆ ಮಿಸ್ ಸೇರಿ ಮಿಸ್ಟೇಕ್ - ಇದು ಉಪ್ಪಿ ಸ್ಯಾಂಪಲ್
** ಮಿಸ್, ಮಿಸ್‌ಯೂಸ್, ಮಿಸ್ಟೇಕ್..? ಇದು ಉಪ್ಪಿ 'ಸೂಪರ್' ಬಿಟ್ಸ್
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೂಪರ್, ಉಪೇಂದ್ರ, ರಾಕ್ಲೈನ್ ವೆಂಕಟೇಶ್, ನಯನತಾರಾ