ಗೋಲ್ಡನ್ ಸ್ಟಾರ್ ಗಣೇಶ್ ಮೇಲೆ ಬಂದಿರುವ ಮತ್ತೊಂದು ಆಪಾದನೆಯಿದು. ಮುಸ್ಸಂಜೆ ಮಹೇಶ್ ನಿರ್ದೇಶನದ 'ಏನೋ ಒಂಥರಾ' ಚಿತ್ರದ ಪ್ರಚಾರಕ್ಕೆ ಬರದೆ ಗಣೇಶ್ ಚಿತ್ರ ಸೋಲುವಂತೆ ಮಾಡಿದ್ದಾರೆ ಎಂದು ನಿರ್ಮಾಪಕ ಎಂ. ಚಂದ್ರಶೇಖರ್ ಅಲವತ್ತುಕೊಂಡ ಬೆನ್ನಿಗೆ, ನನ್ನಿಂದ ಯಾರಿಗೂ ಅನ್ಯಾಯವಾಗಿಲ್ಲ ಎಂದು ಗಣೇಶ್ ಸ್ಪಷ್ಟನೆ ನೀಡಿದ್ದಾರೆ.
ಬಹುಭಾಷಾ ತಾರೆ ಪ್ರಿಯಾಮಣಿ ನಾಯಕಿಯಾಗಿದ್ದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿರುವುದೇ ವಿವಾದ ಭುಗಿಲೇಳಲು ಕಾರಣ. ನಿರ್ದೇಶಕ-ನಿರ್ಮಾಪಕರು ಮತ್ತು ನಾಯಕ ನಟ, ತಾನು ಮಾಡಿದ್ದೇ ಸರಿ ಎಂದು ಹೇಳುತ್ತಾ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಪ್ರಕರಣವೀಗ ನ್ಯಾಯಾಲಯದ ಮೆಟ್ಟಿಲೇರುವ ಲಕ್ಷಣಗಳನ್ನು ತೋರಿಸುತ್ತಿದೆ.
MOKSHA
ಗಣೇಶ್ ಮಲತಾಯಿ ಧೋರಣೆ.. ಚಿತ್ರದ ಪ್ರಚಾರಕ್ಕೆ ಗಣೇಶ್ ಸಹಕರಿಸದೇ ಇದ್ದುದರಿಂದ ನಮಗೆ ಭಾರೀ ನಷ್ಟವಾಗಿದೆ. ಅವರು ಪ್ರಚಾರಕ್ಕೆ ಬರುತ್ತಿದ್ದರೆ ನಷ್ಟವನ್ನು ಕೊಂಚ ತಗ್ಗಿಸಬಹುದಿತ್ತೋ, ಏನೋ? ಆದರೆ ಅವರು ಹಾಗೆ ಮಾಡಿಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ 'ಏನೋ ಒಂಥರಾ' ನಿರ್ದೇಶಕ ಮಹೇಶ್ ಮತ್ತು ನಿರ್ಮಾಪಕ ಚಂದ್ರಶೇಖರ್ ಆರೋಪಿಸಿದರು.
ಚಿತ್ರಕ್ಕಾಗಿ ನಾನು ಖರ್ಚು ಮಾಡಿದ್ದು ಆರು ಕೋಟಿ ರೂಪಾಯಿಗಳು. ಇದರಲ್ಲಿ 95 ಲಕ್ಷ ರೂಪಾಯಿಗಳನ್ನು ಗಣೇಶ್‌ಗೆ ಸಂಭಾವನೆಯಾಗಿ ನೀಡಲಾಗಿತ್ತು. ಆದರೆ ಚಿತ್ರ ಇದುವರೆಗೆ ಒಟ್ಟಾರೆ ಗಳಿಸಿದ್ದು ಕೇವಲ 40 ಲಕ್ಷ ರೂಪಾಯಿಗಳು ಎಂದು ನಿರ್ಮಾಪಕರು ಅಲವತ್ತುಕೊಂಡರು.
ಉಚಿತವಾಗಿ ನಟಿಸಬೇಕು... ಏನೋ ಒಂಥರಾ ಚಿತ್ರ ಗಣೇಶ್ ಅವರ ಅಸಹಕಾರದಿಂದಾಗಿ ಸೋತಿದೆ. ಹಾಗಾಗಿ ಅವರು ನನ್ನ ನಿರ್ಮಾಣದ ಇನ್ನೊಂದು ಕಡಿಮೆ ಬಜೆಟ್ ಚಿತ್ರದಲ್ಲಿ ಉಚಿತವಾಗಿ ನಟಿಸಬೇಕು. ಅವರು ಫ್ರೀ ಡೇಟ್ಸ್ ಕೊಡಬೇಕು. ಇಲ್ಲದೇ ಇದ್ದರೆ ಗಣೇಶ್ ಮನೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಇದೇ ಸಂದರ್ಭದಲ್ಲಿ ನಿರ್ಮಾಪಕರು ಬೆದರಿಕೆ ಹಾಕಿದ್ದಾರೆ.
ಸುಳ್ಳು ಆರೋಪ: ಗಣೇಶ್ ಪ್ರಚಾರಕ್ಕೆ ಬಂದಿಲ್ಲ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಗಣೇಶ್, ತಾನು ಸುವರ್ಣ ನ್ಯೂಸ್ ಚಾನೆಲ್, ಉದಯ ಟಿವಿ ಸೇರಿದಂತೆ ಹಲವು ಚಾನೆಲ್‌ಗಳಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ; ಕೆಲವು ಸಿನಿಮಾ ಪತ್ರಕರ್ತರನ್ನು ನಾನೇ ಕರೆದು ಚಿತ್ರದ ಬಗ್ಗೆ ಸಂದರ್ಶನ ನೀಡಿದ್ದೇನೆ. ಇವೆಲ್ಲ ನಿರ್ಮಾಪರಿಗೆ ಚೆನ್ನಾಗಿ ಗೊತ್ತಿದೆ ಆದರೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದಿದ್ದಾರೆ.
ನನಗೆ ಬರಬೇಕಾದ ಹಣವನ್ನು ನೀಡದೇ ಇದ್ದಾಗಲೂ ನಾನು ಸುಮ್ಮನಿದ್ದೆ. ಸಿನಿಮಾದ ಚಿತ್ರೀಕರಣ, ಬಿಡುಗಡೆ ಸೇರಿದಂತೆ ಯಾವುದಕ್ಕೂ ಒಂದು ಸ್ಪಷ್ಟವಾದ ಯೋಜನೆಯನ್ನು ಹೊಂದಿಲ್ಲದ ನಿರ್ಮಾಪಕರಿಂದಾಗಿ ನನಗೆ ಹೆಚ್ಚು ತೊಂದರೆಯಾಗಿದೆ. ಚಿತ್ರ ಬಿಡುಗಡೆಯಾಗುತ್ತದೆ, ಪ್ರಚಾರಕ್ಕೆ ಬರಬೇಕು ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನನ್ನ ವಿದೇಶಿ ಪ್ರವಾಸಗಳನ್ನು ರದ್ದುಗೊಳಿಸಿದ್ದೆ. ಆದರೆ ಕೊನೆ ಕ್ಷಣದಲ್ಲಿ ಎಲ್ಲವನ್ನೂ ರದ್ದು ಮಾಡಿ ನಿರ್ಮಾಪಕರು ಸುಮ್ಮನಾಗುತ್ತಿದ್ದರು ಎಂದು ಗಣೇಶ್ ಸ್ಪಷ್ಟನೆ ನೀಡಿದ್ದಾರೆ.
ನನ್ನಿಂದ ಏನೂ ತಪ್ಪಾಗಿಲ್ಲ. ನನಗೆ ಅಪಮಾನ ಮಾಡುವುದು ನನ್ನ ಅಭಿಮಾನಿಗಳಿಗೆ ಅವಮಾನ ಮಾಡಿದಂತೆ. ಈ ರೀತಿಯಾಗಿ ಆರೋಪ ಮಾಡುವುದು ಸರಿಯಲ್ಲ. ನನ್ನಿಂದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಈ ಅಪವಾದಗಳ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಚೆನ್ನೈಯಿಂದ ಮಾತನಾಡುತ್ತಾ ತಿಳಿಸಿದರು.