ಗೋಲ್ಡನ್ ಸ್ಟಾರ್ ಗಣೇಶ್ ಜತೆ 'ಸರ್ಕಸ್' ಮಾಡಿ ಪಾತಾಳಕ್ಕೆ ತಳ್ಳಲ್ಪಟ್ಟಿದ್ದ ದಯಾಳ್ ಪದ್ಮನಾಭನ್ ಚಿತ್ರರಂಗಕ್ಕೆ ಮರಳಿದ್ದಾರೆ. ಕೆಲ ತಿಂಗಳ ಹಿಂದೆ 'ಕದ್ದು ಮುಚ್ಚಿ' ಮಾಡುತ್ತೇನೆ ಎಂದು ಹೇಳಿದ್ದರಾದರೂ, ಅದು ಜಾರಿಗೆ ಬಂದಿರಲಿಲ್ಲ.
ಈಗ ಅವರ ಕೈಗೆ ಸಿಕ್ಕಿರುವುದು ಬರೋಬ್ಬರಿ ಮೂರು ಚಿತ್ರಗಳು. ಅದರಲ್ಲಿ 'ಯೋಗರಾಜ' ಮಾತ್ರ ಸ್ವಮೇಕ್. 'ಧಿಮಾಕು'ವಿನ ನವೀನ್ ಕೃಷ್ಣ ನಾಯಕರಾಗಿರುವ ಈ ಚಿತ್ರಕ್ಕೆ ಜಂಭದ ಕೋಳಿ ನೀತು ನಾಯಕಿ. ಇದರ ಫೋಟೋ ಶೂಟ್ ಕೂಡ ಮುಗಿಸಲಾಗಿದೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗುತ್ತದೆ ಎಂದು ಪದ್ಮನಾಭನ್ ತಿಳಿಸಿದ್ದಾರೆ.
MOKSHA
ಇನ್ನುಳಿದ ಎರಡು ಚಿತ್ರಗಳು ರಿಮೇಕ್. ಒಂದರಲ್ಲಿ ಫ್ಲಾಪ್ ಹೀರೋ ಮಯೂರ್ ಪಟೇಲ್ ನಾಯಕ. ಚಿತ್ರದ ಹೆಸರು ಮದಗಜ. ಇನ್ನೂ ತಾರಾಗಣ ಅಂತಿಮಗೊಂಡಿಲ್ಲ.
ಇನ್ನೊಂದು 'ಅಕಸ್ಮಾತ್'. ಪ್ರಕಾಶ್ ರೈ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ತೆಲುಗಿನ 'ಐತೆ'ಯ ರಿಮೇಕ್. ಡುಯೆಟ್ ಫಿಲ್ಮ್ಸ್ ಅಡಿಯಲ್ಲಿ ಇದು ನಿರ್ಮಾಣವಾಗುತ್ತಿದೆ ಎಂದು ಪದ್ಮನಾಭನ್ ತನ್ನ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.
ರಿಮೇಕ್ ಮಾಡುತ್ತಿರುವುದಕ್ಕೆ ಯಾವುದೇ ಬೇಸರವಿಲ್ಲ ಎಂದು ಹೇಳಿಕೊಂಡಿರುವ ಅವರು, ಅವೆರಡೂ ಅತ್ಯುತ್ತಮ ಚಿತ್ರಗಳು. ಒಂದಂತೂ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವಂತದ್ದು. 2011ರಲ್ಲಿ ನನ್ನಿಂದ ಮೂರು ಚಿತ್ರಗಳು ಬರುತ್ತಿರುವುದಂತೂ ಹೌದು ಎಂದಿದ್ದಾರೆ.
ಹೀಗೆಂದು ಹೇಳಿರುವ ದಯಾಳ್ ಪದ್ಮನಾಭನ್ ತನ್ನ ಮೊದಲ ಚಿತ್ರ 'ಬಾ ಬಾರೋ ರಸಿಕ'ದಲ್ಲಿ ಕನ್ನಡ ಚಿತ್ರರಂಗದ ಗಮನ ಸೆಳೆದವರು. ಆದರೆ ನಂತರ ಮಸಾಲ, ಯಶವಂತ್, ಸಖ ಸಖಿ ಮುಂತಾದ ಚಿತ್ರಗಳಲ್ಲಿ ನಿರಾಸೆ ಹುಟ್ಟಿಸಿದ್ದರು. 'ಸರ್ಕಸ್' ಉತ್ತಮ ಪ್ರಶಂಸೆ ಪಡೆದುಕೊಂಡರೂ ಬಾಕ್ಸಾಫೀಸಿನಲ್ಲಿ ಬೋರಲಾಗಿತ್ತು.