ಮೊನ್ನೆ ಮೊನ್ನೆಯಷ್ಟೇ ಹಳ್ಳಿ ಹೈದ ರಾಜೇಶ ನಾಯಕನಾಗುತ್ತಿರುವ ಸುದ್ದಿಯನ್ನು ಓದಿದವರಿಗೆ ಇದು ಬೋನಸ್. ಹೌದು, 'ಹಳ್ಳಿ ಹೈದ ಪ್ಯಾಟೇಗ್ ಬಂದ' ಕಾರ್ಯಕ್ರಮಕ್ಕೂ ಮೊದಲು ನಡೆದಿದ್ದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ವಿಜೇತೆ ನಯನಾ ಕೂಡ ಈಗ ನಾಯಕಿಯಾಗುತ್ತಿದ್ದಾರೆ.
ಕಿರುತೆರೆ ನಿರೂಪಕ-ನಿರೂಪಕಿಯರ ಬೆಳ್ಳಿತೆರೆ ಯುಗ ಮುಗಿದ ನಂತರ ಈಗ ರಿಯಾಲಿಟಿ ಶೋಗಳ ವಿಜೇತರ ಕಾಲ ಶುರುವಾಗಿದೆ ಎಂದು ಹೇಳಬಹುದೇನೋ? ರಾಜೇಶ-ಐಶ್ವರ್ಯಾ (ಐಸೂ) ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ಬೆನ್ನಿಗೆ ನಯನಾ ಕೂಡ ಅದೇ ಹಾದಿ ತುಳಿದಿದ್ದಾರೆ.
ಕಿಚ್ಚ ಸುದೀಪ್ ನೇತೃತ್ವದಲ್ಲಿ ಶಿವಮೊಗ್ಗದ ಪುರದಾಳು ಗ್ರಾಮದಲ್ಲಿ ನಡೆದಿದ್ದ ರಿಯಾಲಿಟಿ ಶೋದಲ್ಲಿ ಪಾಲ್ಗೊಂಡು ಇನ್ನಿಲ್ಲದ ಕಷ್ಟಪಟ್ಟು ಗೆದ್ದು ನಗರಕ್ಕೆ ಹೋಗಿದ್ದ ತುಮಕೂರು ಮೂಲದ ಬೆಂಗಳೂರು ಹುಡುಗಿ ನಯನಾ ಚಿತ್ರರಂಗ ಪ್ರವೇಶ ಮಾಡಿದ್ದಾರಾದರೂ, ಹಾಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಆಕ್ಷನ್, ರಾಜಕಾರಣಿ, ಖಡಕ್ ನಾಯಕಿ ಅಥವಾ ಬಬ್ಲಿ ಪಾತ್ರಗಳಾದರೂ ಓಕೆ. ಇವುಗಳಲ್ಲಿ ಮಿಂಚುವ ಆಸೆಯೂ ಇದೆ. ಆದರೆ ವಿಪರೀತ ಗ್ಲಾಮರಸ್ ಬೇಡ. ಎಕ್ಸ್‌ಪೋಸ್ ಅಂತೂ ಬೇಡವೇ ಬೇಡ ಎಂದು ಪುಟ್ಟಸ್ವಾಮಿ-ರಮಾಮಣಿ ದಂಪತಿ ಪುತ್ರಿಯಾಗಿರುವ ಬಿ.ಕಾಂ. ಪದವೀಧರೆ ನಯನಾ ತಿಳಿಸಿದ್ದಾರೆ.
ಈ ಚಿತ್ರದ ಹೀರೋ ನಿರ್ದೇಶಕ ಬಿ. ರಾಮಮೂರ್ತಿಯವರ ಪುತ್ರ ಅಕ್ಷಯ್. ಚಿತ್ರದ ಹೆಸರು 'ಲಿಮಿಟ್'. 'ಹೆಚ್ಚಾದರೆ ಅಮೃತ ಕೂಡ...' ಎನ್ನುವುದು ಟ್ಯಾಗ್‌ಲೈನ್. 'ಮದುವೆ..'ಗಳಲ್ಲಿ ಬ್ಯುಸಿಯಾಗಿರುವ ಮಲಯಾಳಿ ಮಾಂತ್ರಿಕ ದಿನೇಶ್ ಬಾಬು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇದು ದಿನೇಶ್ ಬಾಬು 101ನೇ ಚಿತ್ರ ಎನ್ನುವುದು ವಿಶೇಷ. ಹಾಗಾಗಿ ಹೆಚ್ಚಿನ ಕಾಳಜಿ ವಹಿಸಿರುವ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಉಮೇಶ್ ಬಣಕಾರ್ ಮತ್ತು ಅನಿಲ್ ಪಿ. ಮೆಣಸಿನಕಾಯಿ ಹಣ ಹಾಕುತ್ತಿದ್ದಾರೆ.
'ಮತ್ತೊಂದು ಮದುವೆನಾ?' ಚಿತ್ರ ತಂಡವೇ ಬಹುತೇಕ 'ಲಿಮಿಟ್'ನಲ್ಲೂ ಮುಂದುವರಿಯಲಿದೆ. ಇದಕ್ಕೆ ಅಪವಾದ ಶರಣ್ ಇಲ್ಲದೇ ಇರುವುದು ಮಾತ್ರ. ಅನಂತ್ ನಾಗ್ ಇಲ್ಲೂ ಪ್ರಮುಖ ಪಾತ್ರದಲ್ಲಿದ್ದಾರೆ.
ಅಂದ ಹಾಗೆ ಇದು ಲವ್ ಸ್ಟೋರಿ ಅಲ್ಲ. ಹಾಸ್ಯ ಪ್ರಧಾನ ಚಿತ್ರ. ವಾಸ್ತವ ಸ್ಥಿತಿಯನ್ನು ಬಿಂಬಿಸುತ್ತಾ ಸಮಾಜಕ್ಕೆ ಸಂದೇಶವನ್ನು ನೀಡುವ ಸಿನಿಮಾ. ಆದರೆ ಅಪ್ಪಟ ಮನೋರಂಜನೆಯನ್ನು ಗುರಿಯಾಗಿಟ್ಟುಕೊಡಿದೆ ಎಂದು ನಿರ್ಮಾಪಕ ಉಮೇಶ್ ಬಣಕಾರ್ ಹೇಳಿಕೊಂಡಿದ್ದಾರೆ.