ಸಾಹಸಸಿಂಹ ವಿಷ್ಣುವರ್ಧನ್ ಅಗಲಿ ಇಂದಿಗೆ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿನ ಸಮಾಧಿ ಸ್ಥಳಕ್ಕೆ ಸಾಗರೋಪಾದಿಯಲ್ಲಿ ಹರಿದು ಬಂದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ, ಆರಾಧ್ಯಮೂರ್ತಿಗೆ ನಮನ ಸಲ್ಲಿಸಿದರು.
ಉತ್ತರಳ್ಳಿಯಲ್ಲಿರುವ ಸ್ಟುಡಿಯೋಗೆ ಮೆರವಣಿಗೆಯಲ್ಲಿ ಸಾಗಿದ ಸಾವಿರಾರು ಅಭಿಮಾನಿಗಳು ಗೌರವ ಅರ್ಪಿಸಿದರು. ಮಕ್ಕಳು, ಮಹಿಳೆಯರು, ವೃದ್ಧರೆನ್ನದೆ ಸಾವಿರಾರು ಮಂದಿ ಸಾಲುಗಟ್ಟಿ ನಿಂತು ವಿಷ್ಣು ಸಮಾಧಿಗೆ ನಮಸ್ಕರಿಸಿದರು. ಇದು ತಡರಾತ್ರಿಯವರೆಗೂ ಮಂದುವರಿಯಲಿದೆ.
2009ರ ಡಿಸೆಂಬರ್ 30ರ ನಸುಕಿನಲ್ಲಿ ವಿಷ್ಣುವರ್ಧನ್ ಅಸ್ತಂಗತರಾಗಿದ್ದರು. ಇಂದು ಅವರ ಮೊದಲನೇ ಪುಣ್ಯ ಸ್ಮರಣೆ. ಈ ಹಿನ್ನೆಲೆಯಲ್ಲಿ ಅಭಿನಯ ಭಾರ್ಗವನಿಗೆ ಗೌರವ ಸಲ್ಲಿಸಲು ಸರಕಾರದ ಪರವಾಗಿ ಸಚಿವೆ ಶೋಭಾ ಕರಂದ್ಲಾಜೆ ಆಗಮಿಸಿದ್ದರು.
ಪತ್ನಿ-ಮಕ್ಕಳಿಂದ ಪೂಜೆ... ವಿಷ್ಣು ಸಹೋದರ ರವಿಕುಮಾರ್, ಪತ್ನಿ ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿವರ್ಧನ್, ಅಳಿಯ ಅನಿರುದ್ಧ ಸೇರಿದಂತೆ ಕುಟುಂಬದ ಸದಸ್ಯರು ಕೂಡ ಇದೇ ಸಂದರ್ಭದಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿದರು.
ಶಾಂತಿಯ ಸಂಕೇತವಾಗಿ ಭಾರತಿಯವರು ಪಾರಿವಾಳವನ್ನು ಹಾರಿ ಬಿಟ್ಟರು. ಈ ಹೊತ್ತಿನಲ್ಲಿ ಅಭಿಮಾನಿಗಳು, 'ಕರುಣಾಮಯಿ ವಿಷ್ಣುವರ್ಧನ್‌ಗೆ ಜೈ' ಎಂದು ಘೋಷಣೆಗಳನ್ನು ಕೂಗಿದರು.
PR
ಜನತೆಯ ಪರವಾಗಿ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಭಾರತಿ ಜತೆಯಾಗಿ ವಿಷ್ಣು ಸಮಾಧಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತಿ ವಿಷ್ಣುವರ್ಧನ್, ಎಲ್ಲವೂ ಶಾಂತಿಯುತವಾಗಿ ನಡೆಯಬೇಕು ಎನ್ನುವುದು ನಮ್ಮ ಆಸೆ. ಅದೇ ರೀತಿ ನಡೆಯುತ್ತಿದೆ. ವಿಷ್ಣುವರ್ಧನ್ ಎನ್ನುವುದು ಒಂದು ಶಕ್ತಿ. ಆ ಶಕ್ತಿ ಯಾವತ್ತೂ ಶಕ್ತಿಯಾಗಿಯೇ ಉಳಿಯಬೇಕು ಎಂದು ಅಭಿಮಾನಿಗಳಲ್ಲಿ ಪುಳಕ ಹುಟ್ಟಿಸಿದರು.
ರಕ್ತದಾನ, ನೇತ್ರದಾನ... ಅಭಿಮಾನಿ ದೇವರುಗಳು ಅಗಲಿದ ನಾಯಕನಿಗೆ ಗೌರವ ಸಲ್ಲಿಸಲು ಆರಿಸಿಕೊಂಡ ಮಾರ್ಗವಿದು. ಸ್ಟುಡಿಯೋದಲ್ಲೇ ಟೆಂಟ್ ಹಾಕಿ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, ನೂರಾರು ಮಂದಿ ರಕ್ತದಾನ ಮಾಡಿದರು.
ಅಲ್ಲಿಗೆ ಭೇಟಿ ನೀಡಿದ ಭಾರತಿ, ಅಭಿಮಾನಿ ರಕ್ತದಾನಿಗಳ ಯೋಗಕ್ಷೇಮ ವಿಚಾರಿಸಿ ಸಂತೈಸಿದರು. ಇದೇ ಸಂದರ್ಭದಲ್ಲಿ ನೂರಾರು ಮಂದಿ ಅಭಿಮಾನಿಗಳು ನೇತ್ರದಾನ ಮಾಡುವ ಸಂಬಂಧ ದಾಖಲೆ ಪತ್ರಗಳಿಗೂ ಸಹಿ ಮಾದರಿಯಾದರು.
ವಿಷ್ಣು ವೇಷದಲ್ಲಿ ಅಭಿಮಾನಿಗಳು... 200 ಚಿತ್ರಗಳಲ್ಲಿ ಅಭಿನಯಿಸಿರುವ ವಿಷ್ಣುವರ್ಧನ್ ಅವರ ಜನಪ್ರಿಯ ಪಾತ್ರಗಳನ್ನು ಅನುಕರಿಸುವ ಮೂಲಕ ನೆರೆದಿದ್ದವರಲ್ಲಿ ವಿಷ್ಣು ಚಿತ್ರ ಮತ್ತೆ ನೆನಪಿಸುವಂತೆ ಮಾಡಿದ್ದು ವಿಷ್ಣು ವೇಷಧಾರಿಗಳು.
ಯಜಮಾನ, ಸೂರ್ಯವಂಶ, ಆಪ್ತರಕ್ಷಕ ಚಿತ್ರಗಳಲ್ಲಿ ವಿಷ್ಣುವರ್ಧನ್ ಧರಿಸಿದ್ದ ವೇಷ ಭೂಷಣಗಳ ಮಾದರಿಯನ್ನು ತೊಟ್ಟುಕೊಂಡಿದ್ದ ಅಪ್ಪಟ ಅಭಿಮಾನಿಗಳು ಸಮಾಧಿ ಇರುವ ಸ್ಟುಡಿಯೋ ಆವರಣದಲ್ಲಿ ತಮ್ಮ ನಾಯಕನನ್ನು ಈ ರೀತಿಯಾಗಿ ನೆನಪಿಸಿಕೊಂಡರು.
ಸ್ನೇಹಲೋಕ ತಂಡದ ಸದಸ್ಯರು, ವಿಷ್ಣುವರ್ಧನ್ ಕೊನೆಗಾಲದ ಆಪ್ತ ನಟ ಶಿವರಾಮು, ನಿರ್ದೇಶಕ ನಾಗಣ್ಣ ಸೇರಿದಂತೆ ಚಿತ್ರರಂಗದ ನೂರಾರು ಗಣ್ಯರು ಸಮಾಧಿ ಸ್ಥಳಕ್ಕೆ ಬಂದು ಗೌರವ ಸಲ್ಲಿಸಿದರು.