ಕನ್ನಡ ಚಿತ್ರರಂಗದ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಎಂದಾಕ್ಷಣ ಜ್ಞಾಪಕಕ್ಕೆ ಬರುವುದು ವಿಜಯ್ ಅಭಿನಯದ 'ದುನಿಯಾ' ಚಿತ್ರ. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಚಿತ್ರ ಅದು. ನೋಡಿದ ಪ್ರತಿಯೊಬ್ಬರೂ ಮೆಚ್ಚುಗೆ ಸೂಚಿಸಿದ ಕನ್ನಡ ಚಿತ್ರರಂಗದ ಅಪರೂಪದ ಚಿತ್ರ ಎನ್ನಬಹುದು.
ಅಂತಹ ಚಿತ್ರಕ್ಕೆ ಸಾಹಸ ನೀಡಿದ ಡಿಫರೆಂಟ್ ಡ್ಯಾನಿಗೆ ಅಲ್ಲಿಂದ ಶುರುವಾದ ಡಿಮ್ಯಾಂಡ್ ಏರುತ್ತಲೇ ಹೋಗಿದೆ. ಈ 'ದುನಿಯಾ' ತೆಲುಗಿನಲ್ಲಿ ರೀಮೇಕ್ ಆಗುತ್ತಿದ್ದು, ಅಲ್ಲೂ ಇವರದ್ದೇ ಸಾಹಸ ನಿರ್ದೇಶನ. ಅಲ್ಲಿಗೆ ಇವರ ಖ್ಯಾತಿ ನಿಂತಿಲ್ಲ, ಇತ್ತೀಚೆಗೆ ಒಂದು ಮಲಯಾಳಂ ಚಿತ್ರಕ್ಕೂ ಸ್ಟಂಟ್ ಮಾಡಿಕೊಟ್ಟು ಬಂದಿದ್ದಾರಂತೆ.
ತೆಲುಗು ಹಾಗೂ ಮಲೆಯಾಳಂ ಚಿತ್ರ ನಿರ್ದೇಶಕರು 'ದುನಿಯಾ' ಚಿತ್ರವನ್ನು ನೋಡಿ ಡ್ಯಾನಿಯೇ ಅವರ ಮುಂದಿನ ಚಿತ್ರಗಳಿಗೆ ಸಾಹಸ ನಿರ್ದೇಶಕರು ಎಂದು ಫಿಕ್ಸ್ ಆಗಿ ಡ್ಯಾನಿ ಕೈಯಲ್ಲೇ ಮಾಡಿಸಿದ್ದಾರೆ. ಆದರೆ, ಈ ಡ್ಯಾನಿಗೋ ಕನ್ನಡದಲ್ಲಿ ಬಿಡುವಿಲ್ಲದ ಕೆಲಸ. ಇನ್ನೂ ಇತರ ಭಾಷೆ ಚಿತ್ರಗಳಿಗೆ ಹೊರನಾಡಿಗೆ ಹೋಗಿ ಸ್ಟಂಟ್ ಡೈರೆಕ್ಷನ್ ಮಾಡಿಕೊಡುವುದೆಂದರೆ ತುಂಬಾ ಕಷ್ಟ ಕೆಲಸ ಎನ್ನುತ್ತಿದ್ದಾರೆ.
ಡ್ಯಾನಿ ಸಾಹಸ ಸಂಯೋಜಿಸಿರುವ ಮಲೆಯಾಳ ಚಿತ್ರದ ಹೆಸರು 'ಸಿಟಿ ಆಫ್ ಗಾಡ್'. ತಮಿಳು, ತೆಲುಗು, ಮಲೆಯಾಳಂ ಖ್ಯಾತ ನಟ ಪೃಥ್ವಿರಾಜ್ ಈ ಚಿತ್ರದ ನಾಯಕ. 'ಸಿಟಿ ಆಫ್ ಗಾಡ್' ಇನ್ನೂ ಚಿತ್ರ ಬಿಡುಗಡೆಯಾಗಿಲ್ಲ. ಆಗಲೇ ಈ ಚಿತ್ರದಲ್ಲಿನ ಡ್ಯಾನಿ ಮಾಡಿದ ಕೆಲಸವನ್ನು ಕಂಡವರು ಮತ್ತಷ್ಟು ಚಿತ್ರಗಳಿಗೆ ಆಫರ್ ಕೊಟ್ಟಿದ್ದಾರಂತೆ.
ಸದ್ಯಕ್ಕೆ ಕನ್ನಡದಲ್ಲಿ ಸುದೀಪ್ ಅಭಿನಯದ 'ಕೆಂಪೇಗೌಡ' ಹಾಗೂ ದಿಗಂತ್ - ಪ್ರಜ್ವಲ್ ಜೋಡಿಯ ಹೊಸ ಚಿತ್ರಕ್ಕೆ ಡ್ಯಾನಿಯದ್ದೇ ಸಾಹಸ ಸಂಯೋಜನೆ. ಈ ಎರಡೂ ಪ್ರಾಜೆಕ್ಟ್‌ಗಳು ಮುಗಿದ ನಂತರ ಅವರೇ ಒಂದು ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ. ಈ ಮುಂಬರುವ ಚಿತ್ರಕ್ಕೆ ಆದಿತ್ಯ ನಾಯಕ ಎಂದು ತಿಳಿಸಿದ್ದಾರೆ.