ಚಿತ್ರಗಳ ಹೆಸರಿನಲ್ಲಿ ಅತಿ ಹೆಚ್ಚು ಮ್ಯಾಜಿಕ್ ಮಾಡಿದ್ದು ಉಪೇಂದ್ರ. ಈ ನಿಟ್ಟಿನಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡ ಹಿಂದೆ ಬಿದ್ದಿಲ್ಲ. ಹುಬ್ಬಳ್ಳಿ, ಬೆಳಗಾಂ ಎಂದೆಲ್ಲ ಊರುಗಳ ಹೆಸರಿಡುತ್ತಾ ಬಂದಿದ್ದಾರೆ. ಈಗ ಇಲ್ಲೊಬ್ಬ ನಿರ್ದೇಶಕರು 'ಜನವರಿ 1 ಬಿಡುಗಡೆ' ಎಂದು ನೇರವಾಗಿ ಬಿಡುಗಡೆ ಹೇಳಿರುವ ಶೀರ್ಷಿಕೆಯನ್ನೇ ಇಟ್ಟು ಗಮನ ಸೆಳೆದಿದ್ದಾರೆ.
ಸಹಜವಾಗಿ ಜನರು 'ಜನವರಿ 1 ಬಿಡುಗಡೆ'ಯಾಗುತ್ತಿದೆ, ಯಾವುದೋ ಒಂದು ಹೊಸ ಚಿತ್ರ ಎಂದು ಕೊಳ್ಳಬಹುದು. ಆದರೆ ಇದು ಹೊಸ ಚಿತ್ರವೊಂದರ ಹೆಸರು ಎಂದು ತಿಳಿಯಬೇಕಾದರೆ ಕೊಂಚ ತಲೆಗೆ ಕೆಲಸ ಕೊಡಬೇಕು. ಈ ರೀತಿ ಚಿತ್ರ-ವಿಚಿತ್ರ ಶೀರ್ಷಿಕೆ ಹಾಗೂ ಟ್ಯಾಗ್ ಲೈನ್ ಕೊಟ್ಟರೆ ಪ್ರೇಕ್ಷಕರನ್ನು ಚೆನ್ನಾಗಿ ಸೆಳೆಯಬಹುದು ಎನ್ನುವುದು ನಿರ್ದೇಶಕ ಹಾಗೂ ನಿರ್ಮಾಪಕರ ಐಡಿಯಾ ಇರಬೇಕು.
ತಮಿಳು ಮೂಲದ ವರ್ಮಾ ಈ ಚಿತ್ರದ ನಿರ್ದೇಶಕರು. ಅವರ ಪ್ರಥಮ ಕನ್ನಡ ಚಿತ್ರ ಇದು. ಅವರೇ ಇಟ್ಟಿರುವ ಹೆಸರು ಇದು. ಇನ್ನೂ ಈ ಚಿತ್ರದ ನಾಯಕಿ ಪೂಜಾಗಾಂಧಿ, 'ಶಿಷ್ಯ' ಚಿತ್ರದಲ್ಲಿ ನಟಿಸಿದ್ದ ದೀಪಕ್ ಚಿತ್ರದ ನಾಯಕ. 2010ರಲ್ಲಿ ಪೂಜಾಗಾಂಧಿ ನಟಿಸಿದ ಹಲವಾರು ಚಿತ್ರಗಳ ಸೋಲು ಕಂಡರೂ ಆಕೆ ಬೇಡಿಕೆಯನ್ನು ಮಾತ್ರ ಹಾಗೇ ಉಳಿಕೊಂಡಿದ್ದಾರೆ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿ.
ಚಿತ್ರ ನಿರ್ಮಾಪಕ ಯುಗಂಧರ್ ಸಹ ನೆರೆಯ ತಮಿಳುನಾಡಿನವರು. ಉಳಿದಂತೆ ಚಿತ್ರದ ತಾರಾಬಳಗದಲ್ಲಿ ಮಿಥುನ್, ನಾಗಕಿರಣ್, ರಮೇಶ್ ಭಟ್, ತುಳಸಿ ಶಿವಮಣಿ, ಸಾಧು ಕೋಕಿಲ ಹಾಗೂ ಗುರುಪ್ರಸಾದ್ ಇತರರು ಇದ್ದಾರೆ.
ಗೋಪಿ ಅವರ ಸಂಗೀತ, ಸತ್ಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯಲಿದೆ. ಸಿನಿಮಾ ಜನವರಿ 1ರಂದು ಮಾತ್ರ ಬಿಡುಗಡೆಯಾಗುತ್ತಿಲ್ಲ ಎನ್ನುವುದು ಇದಕ್ಕೊಂದು ಅಪವಾದ!