ಹೊಸ ವರ್ಷದ ಪ್ರಯುಕ್ತ ಈ ಬಾರಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಒಡೆತನದ ವಜ್ರೇಶ್ವರಿ ಕಂಬೈನ್ಸ್ 2011ರ ಕ್ಯಾಲೆಂಡರ್ ಹೊರತಂದಿದೆ.
ಕ್ಯಾಲೆಂಡರ್ ಬಹಳ ಅದ್ಬುತವಾಗಿ ಮೂಡಿಬಂದಿದೆ ಎಂಬುದು ಎಲ್ಲರ ಮಾತು. ಪ್ರತಿ ಪುಟಗಳೂ ವಿಭಿನ್ನ ಹಾಗೂ ಆಕರ್ಷಕವಾಗಿದೆ. ಡಾ. ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರ ಭಾವಚಿತ್ರದೊಂದಿಗೆ ಕ್ಯಾಲೆಂಡರ್ ಆರಂಭವಾಗುತ್ತದೆ. ರಾಜ್‌ಕುಮಾರ್ ಅವರ ವಿವಿಧ ಚಿತ್ರಗಳ ವಿವಿಧ ಭಂಗಿಗಳ ಭಾವಚಿತ್ರಗಳನ್ನು ಪ್ರಕಟಿಸಲಾಗಿದೆ.
ಇದರಲ್ಲಿ ಕೆಲವು ಸಿನಿಮಾಕ್ಕೆ ಸಂಬಂಧಪಟ್ಟವು ಮತ್ತೆ ಕೆಲವು ಖಾಸಗಿ ಜೀವನದ ಚಿತ್ರಗಳು. ಬಿ.ಕೆ.ಎಸ್. ವರ್ಮಾ ರಚಿಸಿದ ರಾಜ್ ಅವರ ಕಲಾಕೃತಿಯನ್ನು ಬಳಸಿಕೊಂಡಿರುವುದು ವಿಶೇಷ. ಆಯಾಯ ತಿಂಗಳಲ್ಲಿರುವ ದಿನಗಳನ್ನು ವಿಶೇಷವಾಗಿ ಗುರುತಿಸಲಾಗಿದೆ. ಆ ದಿನಗಳಿಗೆ ಸಂಬಂಧಿಸಿದ ಭಾವಚಿತ್ರಗಳನ್ನು ಇಲ್ಲಿ ನಮೂದಿಸಲಾಗಿದೆ.
ಉದಾಹರಣೆಗೆ ಮಹಾಶಿವರಾತ್ರಿಗೆ ಶಿವ-ಪಾರ್ವತಿ ಫೋಟೋ, ಬುದ್ಧ ಪೂರ್ಣಿಮೆಗೆ ಬುದ್ಧನ ಚಿತ್ರ, ಹೋಳಿಗೆ ಬಣ್ಣ ಹೊಂದಿದ ತಟ್ಟೆ... ಹೀಗೆ ವಿಶಿಷ್ಟವಾದ ರೀತಿಯಲ್ಲಿ ಕ್ಯಾಲೆಂಡರ್ ಮೂಡಿಬಂದಿದೆ. ಇದೊಂದು ಸಂಗ್ರಹಯೋಗ್ಯ ಕ್ಯಾಲೆಂಡರ್ ಎನ್ನುವುದರಲ್ಲಿ ಯಾವುದೇ ಸಂಶಯಗಳಿಲ್ಲ.