ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಸೂಪರ್' ಉಪೇಂದ್ರ ಮೇಲೆ ಮುಗಿಬಿದ್ದ ಮಲಯಾಳಿಗಳು! (Upendra | Aneesh Varma | Kavyam | Bhavana)
ಸುದ್ದಿ/ಗಾಸಿಪ್
Bookmark and Share Feedback Print
 
ಉಪೇಂದ್ರ ಮಲಯಾಳಂ ಚಿತ್ರದಲ್ಲಿ ನಟಿಸುತ್ತಾರೆ ಎಂದು ಕಳೆದ ವರ್ಷದ ಆರಂಭದಲ್ಲಿ ಸುದ್ದಿಯಾಗಿತ್ತು. ಅದು ಆಗ ನಿಜವಾಗಲಿಲ್ಲ. ಈಗಲೂ ನಿಜವಾಗುತ್ತಿಲ್ಲ. ಆದರೆ ಮಲಯಾಳಂನ ನಿರ್ದೇಶಕರು ಕನ್ನಡದಲ್ಲಿ ರಿಯಲ್ ಸ್ಟಾರ್ ಉಪ್ಪಿಯನ್ನು ನಿರ್ದೇಶಿಸುತ್ತಿದ್ದಾರೆ. ನಾಯಕಿಯೂ ಮಲಯಾಳಿ ಕುಟ್ಟಿ. ನಿರ್ಮಾಪಕರೂ ದೇವರ ಸ್ವಂತ ನಾಡಿನವರು!
PR

ಪ್ರಸಕ್ತ 'ಸೂಪರ್' ಯಶಸ್ಸಿನಿಂದ ಸೂಪರ್ ಮೂಡಿನಲ್ಲಿರುವ ಉಪ್ಪಿ ಅದರ ತೆಲುಗು ಆವೃತ್ತಿಯಲ್ಲಿ ಬ್ಯುಸಿ. ಕೆಲವೇ ದಿನಗಳಲ್ಲಿ ಆಂಧ್ರ ಸೇರಿದಂತೆ ಹಲವೆಡೆ ತೆಲುಗು ಭಾಷೆಯ 'ಸೂಪರ್' ಬಿಡುಗಡೆಯಾಗಲಿದೆ. ಈ ನಡುವೆ ಉಪ್ಪಿ ನೀಡಿರುವ ಸುದ್ದಿಯಿದು. ಮತ್ತೆ ಒಂದಷ್ಟು ಇತರ ನಿರ್ದೇಶಕರ ಚಿತ್ರಗಳಲ್ಲಿ ಕೆಲಸ ಮಾಡುವ ಇರಾದೆ ಈ ಮೂಲಕ ವ್ಯಕ್ತವಾಗಿದೆ.

ಉಪ್ಪಿಯನ್ನು ನಿರ್ದೇಶಿಸುತ್ತಿರುವವರು ಅನೀಶ್ ವರ್ಮಾ. ಬಹುತೇಕ ಹೊಸ ನಿರ್ದೇಶಕ. 2008ರಲ್ಲಿ ಸುರೇಶ್ ಗೋಪಿ, ನವ್ಯಾ ನಾಯರ್ ನಟಿಸಿದ್ದ 'ಕಾವ್ಯಂ' ಎಂಬ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದರಾದರೂ, ಸುದ್ದಿ ಮಾಡಿರಲಿಲ್ಲ. ಅನೀಶ್ ವರ್ಮಾ ಮತ್ತು ಸಂತೋಷ್ ಎಂಬಿಬ್ಬರು ಸೇರಿ ನಿರ್ದೇಶಿಸಿದ್ದ ಸಿನಿಮಾ ಆಗಿತ್ತದು.

ನಂತರದ ದಿನಗಳಲ್ಲಿ ಅನೀಶ್ ಉಪ್ಪಿಗೆ ಗಾಳ ಹಾಕಲು ಆರಂಭಿಸಿದ್ದರು. ಉಪ್ಪಿಯನ್ನು ಮಲಯಾಳಂ ಚಿತ್ರರಂಗದಲ್ಲಿ ಪರಿಚಯಿಸಬೇಕು ಎನ್ನುವುದು ಅವರ ಆಸ್ಥೆಯಾಗಿತ್ತು. ಇದೇ ಕಳೆದ ವರ್ಷ ಸುದ್ದಿಯಾಗಿದ್ದು. ದಿಲೀಪ್ ಮತ್ತು ಕಾವ್ಯ ಮಾಧವನ್ ತಾರಾಗಣವಿದ್ದ 'ತಿಲಕಂ' ಎಂಬ ಸೂಪರ್ ಹಿಟ್ ಚಿತ್ರವನ್ನು ನಿರ್ಮಾಪಕರೂ ಆಗಿರುವ ಅನೀಶ್ ಕೊನೆಗೂ ಅಂದುಕೊಂಡದ್ದನ್ನು ಸಾಧಿಸುವಲ್ಲಿ ಅಲ್ಪ ಯಶಸ್ಸು ಕಂಡಿದ್ದಾರೆ.

'ಜಾಕಿ' ಮೂಲಕ ಕನ್ನಡಕ್ಕೆ ಬಂದಿದ್ದ ಭಾವನಾ ಮೆನನ್ ಈ ಚಿತ್ರದಲ್ಲಿ ನಾಯಕಿ. ಇದಕ್ಕಿರುವ ಪ್ರಮುಖ ಕಾರಣ, ಭಾವನಾರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಇದೇ ಅನೀಶ್ ವರ್ಮಾ ಎನ್ನುವುದು. 'ತಿಲಕಂ' ಚಿತ್ರದಲ್ಲಿ ಭಾವನಾ ಪುಟ್ಟ ಪಾತ್ರವೊಂದನ್ನು ಮಾಡುವ ಮೂಲಕ ಪದಾರ್ಪಣೆ ಮಾಡಿದ್ದರು.

ಸೂಪರ್ ಡಬ್ಬಿಂಗ್ ಮುಗಿದ ಬಳಿಕ ಫೆಬ್ರವರಿಯಲ್ಲಿ ಹೊಸ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಹಣ ಹಾಕುತ್ತಿರುವವರು ಮಲಯಾಳಂ ನಿರ್ಮಾಪಕ ಅನ್ವರ್. ಜೆಸ್ಸಿ ಗಿಫ್ಟ್ ಸಂಗೀತ ನೀಡುತ್ತಿದ್ದಾರೆ.

'ವೈಲ್' ತಮಿಳು ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದ ಕಣ್ಣನ್ ಇಲ್ಲಿ ಛಾಯಾಗ್ರಾಹಕ. ಇನ್ನಿತರ ಕಲಾವಿದರ ಆಯ್ಕೆ ನಡೆಯಬೇಕಿದೆ. ದುಬೈ, ಮಂಗಳೂರು, ಗೋವಾ ಮತ್ತು ಬೆಂಗಳೂರುಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಪೇಂದ್ರ, ಅನೀಶ್ ವರ್ಮಾ, ಕಾವ್ಯಂ, ಭಾವನಾ, ಜೆಸ್ಸಿ ಗಿಫ್ಟ್