ಇದು 'ಮೊಗ್ಗಿನ ಮನಸು' ಹುಡುಗ ಯಶ್ ಎದುರಿಸಿದ ಸಂಕಷ್ಟದ ಸುದ್ದಿ. ಚಿತ್ರವೊಂದಕ್ಕೆ ಸಹಿ ಮಾಡಿದ ನಂತರ ಸಂಭಾವನೆ ಕಡಿಮೆ ಮಾಡಬೇಕು ಎಂದು ಕಿರಿಕಿರಿ ಮಾಡಿ, ಯಶ್ ಜೇಬಿಗೆ ಕತ್ತರಿ ಹಾಕಿದ ಸುದ್ದಿ. ಆದರೆ ಸ್ವತಃ ಯಶ್ ಪಾಲಿಗೆ ಕೇವಲ ರೂಮರ್!
ಮೂಲಗಳ ಪ್ರಕಾರ ರಿಯಲ್ ಎಸ್ಟೇಟ್ ಕುಳವೊಂದು ಚಿತ್ರವೊಂದಕ್ಕಾಗಿ ಯಶ್‌ರನ್ನು ನಾಯಕನ್ನಾಗಿ ಮಾಡಿತ್ತು. ಈ ಸಂಬಂಧ ಒಪ್ಪಂದಕ್ಕೂ ಯಶ್ ಸಹಿ ಹಾಕಿದ್ದರು. 40 ಲಕ್ಷ ರೂಪಾಯಿ ಸಂಭಾವನೆ ನಿಗದಿಯಾಗಿತ್ತು. ಆದರೆ ಇತ್ತೀಚೆಗಷ್ಟೇ ಬಿಡುಗಡೆಯಾದ ಯಶ್ ನಾಯಕರಾಗಿದ್ದ 'ಮೊದಲಾ ಸಲ' ನೋಡಿದ ನಂತರ ನಿರ್ಮಾಪಕ ಫುಲ್ ಚೇಂಜ್.
ಯಶ್ ಅಂತಹ ನಟನೇನೂ ಅಲ್ಲ. ಆತನಿಗೆ ನಾನು 40 ಲಕ್ಷ ರೂಪಾಯಿ ಸಂಭಾವನೆ ಕೊಡೋದಿಲ್ಲ ಎಂದು ತಕರಾರು ತೆಗೆದರು. ಕೊನೆಗೆ ಇದು ತಲುಪಿದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ. ನಿರ್ಮಾಪಕ ಮತ್ತು ಯಶ್ ಇಬ್ಬರೂ ಅಲ್ಲಿಗೆ ಸಂಧಾನಕ್ಕೆಂದು ತೆರಳಿದ್ದರು.
ಆದರೆ ಯಾವುದೇ ಕಾರಣಕ್ಕೂ ತನ್ನ ಸಂಭಾವನೆಯನ್ನು ಕಡಿಮೆ ಮಾಡಲು ಯಶ್ ಸಿದ್ಧರಿರಲಿಲ್ಲ. ಮೂಲ ಒಪ್ಪಂದದಂತೆ ನಿರ್ಮಾಪಕರು 40 ಲಕ್ಷ ರೂಪಾಯಿ ನೀಡಲೇಬೇಕೆಂದು ಅವರು ಪಟ್ಟು ಹಿಡಿದಿದ್ದರು.
MOKSHA
ಸಾಕಷ್ಟು ಚರ್ಚೆ ನಡೆಸಿದ ನಂತರ ಚಲನಚಿತ್ರ ಮಂಡಳಿ ಕೊನೆಗೂ ಯಶ್ ಮನವೊಲಿಸುವಲ್ಲಿ ಯಶಸ್ವಿಯಾಯಿತು. ಸಂಭಾವನೆಯನ್ನು 20 ಲಕ್ಷ ರೂಪಾಯಿಗಳಿಗೆ ಇಳಿಸಲಾಯಿತು. ಕೋರ್ಟಿಗೆ ಹೋಗಬಹುದಾಗಿದ್ದ ಪ್ರಕರಣವೊಂದನ್ನು ಆರಂಭದಲ್ಲೇ ಚಿವುಟಿ ಹಾಕಲಾಯಿತು.
ಏ.. ಹಂಗೆಲ್ಲ ಏನೂ ಇಲ್ಲ: ಯಶ್ ಈ ಸಂಬಂಧ ನೇರವಾಗಿ ಯಶ್ ಅವರನ್ನೇ ಪ್ರಶ್ನಿಸಿದರೆ, ಹಂಗೇನೂ ನಡೆದೇ ಇಲ್ಲ. ಇದೆಲ್ಲ ಗಾಳಿಸುದ್ದಿ ಎಂದು ತೇಲಿಸಿ ಬಿಡುತ್ತಾರೆ.
ನಾನು ಈಗಲೂ 'ಮೊದಲಾ ಸಲ' ಚಿತ್ರದ ಪ್ರಚಾರಕ್ಕೆಂದು ಚಿತ್ರಮಂದಿರಗಳಿಗೆ ಹೋಗುತ್ತಿದ್ದೇನೆ. ಇನ್ನಷ್ಟೇ 'ರಾಜಧಾನಿ' ಬಿಡುಗಡೆಯಾಗಬೇಕಿದೆ. ಕೆಲ ದಿನಗಳ ಹಿಂದಷ್ಟೇ ಮೊದಲ ಪ್ರತಿ ಕೈಗೆ ಸಿಕ್ಕಿದೆ. ಇದನ್ನು ಬಿಟ್ಟು ನಾನು ನಟಿಸುತ್ತಿರುವ ಒಂದೇ ಒಂದು ಚಿತ್ರವೆಂದರೆ 'ಕಿರಾತಕ'. ನೀವು ಹೇಳುತ್ತಿರುವುದೆಲ್ಲ ರೂಮರ್. ಇರಲಿ, ಬಿಡಿ ತೊಂದರೆಯಿಲ್ಲ ಎಂದು ಯಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇತರ ಆರೋಪಗಳ ಬಗ್ಗೆ... ಮೊಗ್ಗಿನ ಮನಸು ಬಿಟ್ಟರೆ ಯಾವುದೇ ಹಿಟ್ ಚಿತ್ರಗಳನ್ನು ನೀಡದ, ಆದರೆ ಬೇಡಿಕೆ ಇರುವ ನಟರಲ್ಲಿ ಪ್ರಮುಖ ಯಶ್. ಆದರೆ ಅವರ ಬಗ್ಗೆ ಸಂಭಾವನೆ, ನಟಿಯರ ಆಯ್ಕೆ, ನಿರ್ದೇಶನದಲ್ಲಿ ತಲೆ ತೂರಿಸುವುದು ಮುಂತಾದ ಸಾಕಷ್ಟು ಆರೋಪಗಳಿವೆ. ಅವೆಲ್ಲ ಸುಳ್ಳು ಎನ್ನುವುದು ಯಶ್ ಸಮಜಾಯಿಷಿ.
ನಾನು 500, 200, 50 ರೂಪಾಯಿಗಳಿಗೆಲ್ಲ ಕೆಲಸ ಮಾಡಿದವನು. ನಾನೆಷ್ಟು ತೂಗುತ್ತೇನೋ ಅಷ್ಟನ್ನಷ್ಟೇ ನಿರ್ಮಾಪಕರು ಕೊಡುತ್ತಾರೆ. ಅದಕ್ಕಿಂತ ಹೆಚ್ಚು ಯಾಕೆ ಕೊಡುತ್ತಾರೆ? ಕೆಲವು ನಿರ್ಮಾಪಕರಂತೂ ನನ್ನ ಚಿತ್ರ ಯಶಸ್ವಿಯಾದ ನಂತರ ಹೆಚ್ಚುವರಿ ಹಣವನ್ನೂ ಕೊಟ್ಟಿದ್ದಾರೆ ಎಂದು ಮೈಸೂರು ಹುಡುಗ ಎದೆಯುಬ್ಬಿಸಿ ಹೇಳಿದ್ದಾರೆ.
ಹೀರೋಯಿನ್‌ಗಳ ಆಯ್ಕೆ ಮತ್ತು ನಿರ್ಮಾಣದ ವಿವಾದಗಳ ಕುರಿತು? 'ನಾಯಕಿಯರನ್ನು ಆರಿಸುವ ಕೆಲಸ ನನ್ನದಲ್ಲ. ಆದರೆ ತಂತ್ರಜ್ಞರ ವಿಚಾರಕ್ಕೆ ಬರುವಾಗ ಕೆಲವೊಂದು ಸಲಹೆಗಳನ್ನು ನೀಡುತ್ತೇನೆ. ಯಾಕೆಂದರೆ ಪ್ರೇಕ್ಷಕರು ಒಂದು ಒಳ್ಳೆಯ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಬಂದಿರುತ್ತಾರೆ. ಹಾಗಾಗಿ ನಾವು ಚಿತ್ರರಂಗದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಆ ಕಾರಣಕ್ಕಾಗಿ ಮಾತ್ರ ಕೆಲವು ಸಲ ಹಾಗೆ ನಡೆದುಕೊಂಡಿದ್ದೇನೆ' ಎನ್ನುತ್ತಾರೆ.
ಬಿಡಿ, ಇಂತಹ ವಿವಾದಗಳೆಲ್ಲ ಇದ್ದದ್ದೇ. 'ಪ್ರೀತಿ ಇಲ್ಲದ ಮೇಲೆ'ಯ ಕ್ಯೂಟ್ ಹುಡುಗ ಮೊನ್ನೆಯಷ್ಟೇ (ಜನವರಿ 8) ಸಿಂಪಲ್ಲಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನೀವೂ ಹ್ಯಾಪಿ ಬರ್ತ್ ಡೇ ಹೇಳಿ ಬಿಡಿ.