ಪ್ರಜ್ವಲ್ ದೇವರಾಜ್ ಹಾಗೂ ದೂದ್‌ಪೇಡಾ ದಿಗಂತ್ -- ಇಬ್ಬಿಬ್ಬರು ಚಾಕಲೇಟ್ ಹೀರೋಗಳನ್ನು ಹಾಕಿಕೊಂಡು ಕೋಡ್ಲು ರಾಮಕೃಷ್ಣ ವಾಪಸ್ ಬಂದಿದ್ದಾರೆ. ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದ ಹಿರಿಯ ನಿರ್ದೇಶಕ ಈ ಬಾರಿ ಕೈಗೆತ್ತಿಕೊಂಡಿರುವುದು 'ಮಿ. ಡುಪ್ಲಿಕೇಟ್'.
ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಕಾಲು ಸವೆಸಿದವರು ಕೋಡ್ಲು. 14ಕ್ಕೂ ಹೆಚ್ಚು ಕಾದಂಬರಿ ಆಧರಿತ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಹೊತ್ತವರು. ಅಂತಹ ಹಿರಿಯ ನಿರ್ದೇಶಕರೊಬ್ಬರು ಪಡ್ಡೆಗಳಂತಿರುವ ಇಬ್ಬರು ಹುಡುಗರನ್ನು ಹಾಕಿಕೊಂಡು ಚಿತ್ರ ಮಾಡಲು ಹೊರಟಿರುವುದು ಹಲವರ ಹುಬ್ಬೇರಿಸಿದೆ.
ಇಲ್ಲಿ ಎಲ್ಲವೂ ಕೊಂಚ ವಿಚಿತ್ರವಾಗಿದೆ. ಮೊದಲನೆಯದಾಗಿ 'ಮಿ. ಡುಪ್ಲಿಕೇಟ್' ಚಿತ್ರದ ಕಥೆ ಕೋಡ್ಲು ಅವರದ್ದಲ್ಲ. ದ್ವಾರ್ಕಿ ರಾಘವ್ ಅವರ ಕಥೆಯಿದು. ನಿರ್ಮಾಣ ಕೂಡ ಕೋಡ್ಲು ಮಾಡುತ್ತಿಲ್ಲ. ಕಶ್ಯಪ್ ದಕೋಜು ಅವರು ಹಣ ಹಾಕುತ್ತಿದ್ದಾರೆ.
ಇನ್ನೊಂದು ವಿಶೇಷ ಎಂದರೆ ಪ್ರಜ್ವಲ್ ತಂದೆಯಾಗಿ ಸ್ವತಃ ದೇವರಾಜ್ ಅಭಿನಯಿಸುತ್ತಿರುವುದು. ಅಪ್ಪ-ಮಗ ಇದೇ ಮೊದಲ ಬಾರಿಗೆ ತೆರೆಯಲ್ಲೂ ನಿಜ ಜೀವನದಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಪಕ್ಕಾ ಕಮರ್ಷಿಯಲ್ ಚಿತ್ರ, ಆದರೆ ರಿಮೇಕ್-ರಿಮಿಕ್ಸ್ ಅಲ್ಲ ಎಂದು ಕೋಡ್ಲು ಸ್ಪಷ್ಟನೆಯನ್ನೂ ನೀಡಿದ್ದಾರೆ.
ದಿಗಂತ್ ಅವರಂತೂ ತುಂಬಾ ಸಹಕಾರ ನೀಡಿದ್ದಾರಂತೆ. ಸಂಭಾವನೆಯಲ್ಲಿ ರಾಜಿ ಮಾಡಿಕೊಂಡದ್ದು ಮತ್ತು ಅವರಿಗಾಗಿ ತಮಿಳು ಚಿತ್ರವೊಂದನ್ನು ಮುಂದಕ್ಕೆ ಹಾಕಿದ್ದು ಅದರಲ್ಲಿ ಪ್ರಮುಖವಾದುದು.
ಚಿತ್ರದಲ್ಲಿ ಇಬ್ಬರು ನಾಯಕರಿಗೆ ನಾಯಕಿ ಒಬ್ಬಳೇ. ಜಮಾನಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶೀತಲ್. ಸುಧಾ ಬೆಳವಾಡಿಯೂ ಚಿತ್ರದಲ್ಲಿದ್ದಾರೆ. ಪ್ರಸಕ್ತ ಮಂಗಳೂರಿನ ಅಲೋಷಿಯಸ್ ಕಾಲೇಜು ಸುತ್ತಮುತ್ತ ಶೂಟಿಂಗ್ ನಡೆಯುತ್ತಿದೆ.