ದಿವ್ಯ ಸ್ಪಂದನ. ಈ ಹೆಸರು ಕನ್ನಡಕ್ಕೆ ಪರಿಚಿತವಾದರೂ, ಈ ಹೆಸರು ರಮ್ಯ ಎಂದು ಬದಲಾಗಿ ಪ್ರಸಿದ್ಧಿಗೆ ಬಂದುದೇ ಹೆಚ್ಚು. ಹುಟ್ಟಿದಾಗ, ಬೆಳೆದಾಗ, ಶಾಲೆಯಲ್ಲಿ, ಕಾಲೇಜಲ್ಲಿ ಈಕೆ ದಿವ್ಯಸ್ಪಂದನ. ಈಗ ಕನ್ನಡ ಹಾಗೂ ತಮಿಳಿನಲ್ಲಿ ಪ್ರಸಿದ್ಧಿಯ ಉತ್ತುಂಗಕ್ಕೇರಿದ ನಟಿ ಈ ದಿವ್ಯ ಸ್ಪಂದನ.
ಬೆಂಗಳೂರಿನಲ್ಲಿ ಹುಟ್ಟಿದ ಈ ದಿವ್ಯಗೆ ಈಗ 28ರವಯಸ್ಸು. ಕಲಿತಿದ್ದು ತಮಿಳುನಾಡಿನ ಖ್ಯಾತ ಪ್ರವಾಸಿ ತಾಣ ಊಟಿಯ ಸೈಂಟ್ ಹಿಲ್ಡಾ ಸ್ಕೂಲ್‌ನಲ್ಲಿ. ಶಾಲಾ ದಿನಗಳಲ್ಲೇ ಹಲವು ಸ್ಟೇಜ್ ಶೋ, ಡ್ಯಾನ್ಸ್‌ಗಳಲ್ಲಿ ಅಭಿನಯಿಸಿ ಅನುಭವವಿರುವ ದಿವ್ಯಗೆ ತನ್ನ ಮಾತೃಭಾಷೆಯ ಜತೆಗೆ ತಮಿಳಿನಲ್ಲೂ ಮಾತನಾಡಲು, ಬರೆಯಲು ಹಾಗೂ ಓದಲು ಬರುತ್ತದೆ.
ಕನ್ನಡದಲ್ಲಿ ಈ ದಿವ್ಯಳ ಮೊದಲ ಚಿತ್ರ ಅಭಿ ಸೂಪರ್ ಹಿಟ್. ಅದೃಷ್ಟ ದೇವತೆಯ ವರಪ್ರಸಾದವೆಂಬಂತೆ ದಿವ್ಯ ರಮ್ಯ ಎಂಬ ಹೆಸರಿನಲ್ಲಿ ನಟಿಸುತ್ತಾ ಬಂದ ಚಿತ್ರವೆಲ್ಲ ಹಿಟ್ ಆಯಿತು. ಸೋತಿದ್ದು ಕಡಿಮೆಯೇ. 2007ರಲ್ಲಿ ಈಕೆಗೆ ಅತಿ ಹೆಚ್ಚು ಪ್ರಸಿದ್ಧಿ ತಂದ ಚಿತ್ರ ನಾಗತಿಹಳ್ಳಿ ನಿರ್ದೇಶನದ ಅಮೃತಧಾರೆ.
ದಿವ್ಯ ತಮಿಳಿನಲ್ಲಿ ಕುತು ರಮ್ಯ ಎಂಬ ಅನ್ವರ್ಥದಿಂದಲೇ ಫೇಮಸ್ ನಟಿ. 2003ರಲ್ಲಿ ಕುತು ಚಿತ್ರದಲ್ಲಿ ನಟಿಸಿದಳು. ಚಿತ್ರ ಭಾರೀ ಹಿಟ್. ನಂತರ ಗಿರಿ ಚಿತ್ರದಲ್ಲಿ 2004ರಲ್ಲಿ ನಟಿಸಿದ ನಂತರ 2007ರವರೆಗೂ ತಮಿಳಿಗೆ ಕಾಲಿಡಲಿಲ್ಲ. ಕನ್ನಡದಲ್ಲಿ ಈ ಸಮಯದಲ್ಲಿ ದಿವ್ಯ ಬ್ಯುಸಿ. 2007ರಲ್ಲಿ ಪೊಳ್ಳಾದವನ್ ಚಿತ್ರದಲ್ಲಿ ಸೂಪರ್‌ಸ್ಟಾರ್ ರಜನೀಕಾಂತ್ ಅಳಿಯ ಧನುಷ್ ಜತೆಗೆ ನಟಿಸಿದಳು. ದೀಪಾವಳಿ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರ ಭರ್ಜರಿ ಹಿಟ್ ಆಯಿತು. ಸ್ವತಃ ರಜನೀಕಾಂತ್ ದಿವ್ಯಳ ಪ್ರತಿಭೆಗೆ ಸೋತು ಹೋಗಿ ಭಾರೀ ಹೊಗಳಿದರಂತೆ.
ನಂತರ ತಮಿಳಿನಲ್ಲಿ ಸೂರ್ಯ ಜತೆಗೆ ನಟಿಸಿದ ವಾರಣಂ ಆಯಿರಂ ಚಿತ್ರ ಕೂಡಾ ಭರ್ಜರಿ ಹಿಟ್ ಆಗಿದೆ. ಒಟ್ಟಿನಲ್ಲಿ ದಿವ್ಯ ಆಕೆಯ ನಿಜ ನಾಮಧೇಯಕ್ಕಿಂತಲೂ ರಮ್ಯಳಾಗಿ ತೆರೆಯಲ್ಲಿ ಕಾಣಿಸಿಕೊಂಡರೆ ಆಕೆಗೆ ಅದೃಷ್ಟ ಕೈಹಿಡಿಯುತ್ತದೆ ಎಂಬುದು ಆಕೆಯ ನಂಬಿಕೆ.
ಒಟ್ಟಿನಲ್ಲಿ ದಿವ್ಯ ಯಾನೆ ರಮ್ಯ ಈಗ ತಮಿಳು ಹಾಗೂ ಕನ್ನಡದಲ್ಲಿ ಅದೃಷ್ಟವಂತ ನಟಿ. ಕನ್ನಡದಲ್ಲಿ ಸದ್ಯ ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಜತೆಗೆ ನಂಬರ್ ವನ್ ಪಟ್ಟಕ್ಕಾಗಿ ಭಾರೀ ಸ್ಪರ್ಧೆಯಲ್ಲಿರುವ ದಿವ್ಯ ಈಗ ಸುದೀಪ್ ಜತೆಗೆ ಕಿಚ್ಚ ಹುಚ್ಚ ಚಿತ್ರದಲ್ಲಿ ಬ್ಯುಸಿ.