ಅವಿನಾಶ್ ಬಿ. ಈ ರಾಜಕೀಯವು ಮತ್ತು ಅಧಿಕಾರವು ಬಿಜೆಪಿಯ ಕೈಯಲ್ಲಿ ಏನೆಲ್ಲಾ ಮಾಡಿಸುತ್ತದೆ ಎಂಬುದಕ್ಕೆ ಮಗದೊಂದು ಉದಾಹರಣೆ ರಾಜ್ಯಸಭೆಗೆ ಕನ್ನಡೇತರರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸುವ ನಿರ್ಧಾರ. ಕನ್ನಡ ನಾಡಿಗಾಗಿ ಒಂದಿನಿತು ಕೂಡ ಕೊಡುಗೆ ಸಲ್ಲಿಸದ, ಕನ್ನಡದ ಗಂಧವೂ ಇಲ್ಲದ, ಚಿತ್ರ ನಟಿ ಹೇಮಾ ಮಾಲಿನಿಯವರನ್ನು ರಾಜಶೇಖರಮೂರ್ತಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಬಿಜೆಪಿಯು ಆರಿಸಿದೆ.
ಹೌದು. ಅದೊಂದು ಕಾಲದಲ್ಲಿ ಹಿರಿಯ ಮುತ್ಸದ್ಧಿಗಳು, ಮೇಧಾವಿಗಳಿರುತ್ತಿದ್ದ, ಚಿಂತಕರ ಚಾವಡಿಯೆಂದೇ ಕರೆಸಿಕೊಳ್ಳುತ್ತಿತ್ತು ರಾಜ್ಯ ಸಭೆ. ಇದು ಹಿರಿಯರ, ಒಳ್ಳೆಯ ಮೆದುಳು ಇದ್ದವರ ತಾಣ. ಇದಕ್ಕೆ ಆಯ್ಕೆಯಾಗಲು ಹೆಚ್ಚಿನವರು ಹೆದರುತ್ತಿದ್ದರು. ಯಾಕೆಂದರೆ ಸರಕಾರದ ವೇಗಕ್ಕೆ ಕಡಿವಾಣ ಹಾಕುವ ಶಕ್ತಿ ಇದೆ ಈ ಸದಸ್ಯರಲ್ಲಿ. ಯಾವುದೇ ಮಸೂದೆಯು ಕಾನೂನು ರೂಪ ತಾಳಬೇಕಿದ್ದರೆ, ತಿದ್ದುಪಡಿಯಾಗಬೇಕಿದ್ದರೆ ರಾಜ್ಯಸಭೆಯ ಅಂಗೀಕಾರ ದೊರೆಯಲೇಬೇಕು. ಇಲ್ಲಿ ಕಾನೂನಿನ ಸಾಧ್ಯಾಸಾಧ್ಯತೆಗಳ ಕುರಿತು ನಡೆಯುವ ಚರ್ಚೆಯನ್ನು ಕೇಳುವುದೂ ಕಿವಿಗೆ ಹಬ್ಬ. ಇದು ಲೋಕಸಭೆಯಂತೆ ವಿಸರ್ಜನೆಯಾಗುವ ಸದನವಲ್ಲ. ಹೀಗಾಗಿ ದೇಶದ ಪ್ರಗತಿ ದೃಷ್ಟಿಯಿಂದ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಸೂಕ್ತ ಪ್ರಾತಿನಿಧ್ಯ ದೊರಕಿಸುವುದಕ್ಕಾಗಿಯೇ ರೂಪಿಸಲಾದ ಚಿಂತಕರ ಚಾವಡಿ.
ಒಕ್ಕೂಟ ವ್ಯವಸ್ಥೆಯಲ್ಲಿ ದೇಶ ರೂಪಿಸುವಾಗ ರಾಜ್ಯಗಳಿಗೆ ನೇರವಾಗಿ ಪ್ರತಿನಿಧಿಸಲು, ಪಾಲ್ಗೊಳ್ಳಲು, ರಾಜ್ಯದ ಹಿತ ಕಾಯುವ ಹಕ್ಕು ಇರಬೇಕು ಎಂಬ ಕಾರಣಕ್ಕೆ ಸೃಷ್ಟಿಯಾಗಿದ್ದು ರಾಜ್ಯಸಭೆ. ಇದು ಮಹತ್ವ ಪಡೆಯುವುದು ಯಾವುದೇ ಸಾಂವಿಧಾನಿಕ ತಿದ್ದುಪಡಿ ಸಂದರ್ಭ. ಲೋಕಸಭೆಯಲ್ಲಿ ಬಹುಮತವಿದ್ದರೂ, ರಾಜ್ಯಸಭೆಯಲ್ಲಿ ಬಹುಮತವಿಲ್ಲದಿದ್ದರೆ ಸರಕಾರವು ಬೇಕಾಬಿಟ್ಟಿಯಾಗಿ ಕಾನೂನು ಜಾರಿಗೆ ತಾರದಂತೆ ನಿಯಂತ್ರಣ ಹೇರುವುದೇ ಈ ರಾಜ್ಯಸಭೆ.
ಅಂಥದ್ದೊಂದು ಜಾಗವಿಂದು ಉದ್ಯಮಿಗಳ ಹಾಗೂ ರಾಜಕೀಯ ನಿರಾಶ್ರಿತರ ಲಾಸ್ಟ್ ರೆಸಾರ್ಟ್ ಆಗುತ್ತಿದೆ. ಲೋಕಸಭೆಯಲ್ಲಿ ಸೋತವರು, ಸೀಟು ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದವರು, ಪಕ್ಷಕ್ಕೆ, ಪಕ್ಷದ ನಾಯಕರಿಗೆ ಸುದೀರ್ಘ ಕಾಲದಿಂದ ನಿಷ್ಠರಾದವರಿಗೆ ಆಶ್ರಯ ತಾಣವಾಗಿಯೂ, ವೃದ್ಧಾಶ್ರಮವಾಗಿಯೂ ಪರಿವರ್ತನೆಯಾಗುತ್ತಿದೆ ಮತ್ತು ಇಂದು ರಾಜ್ಯಪಾಲರ ಹುದ್ದೆಗಳು, ರಾಜಭವನ ಯಾವ ರೀತಿಯಾಗಿ ಮಾರ್ಪಟ್ಟಿದೆಯೋ ಹಾಗಾಗುತ್ತಿವೆ. ಜವಾಬ್ದಾರಿಯಿಲ್ಲದೆಯೇ, ಮತದಾರರಿಗೆ ಉತ್ತರಿಸುವ ಅನಿವಾರ್ಯತೆಯೂ ಇಲ್ಲದೆಯೂ, ಕ್ಷೇತ್ರಾಭಿವೃದ್ಧಿಯತ್ತ ಗಮನ ಹರಿಸಬೇಕಾದ 'ಹೊರೆ'ಯಿಲ್ಲದೆಯೂ ಸರಕಾರದ ಸಂಪೂರ್ಣ ಸವಲತ್ತುಗಳನ್ನು, ಅಷ್ಟು ಮಾತ್ರವಲ್ಲ, ಅದೃಷ್ಟವಿದ್ದರೆ ಮಂತ್ರಿಗಿರಿಯನ್ನೂ ಪಡೆದುಕೊಳ್ಳಬಲ್ಲ ಅದೃಷ್ಟದ ತಾಣವಾಗಿಬಿಟ್ಟಿದೆ ಈ ರಾಜ್ಯಸಭೆ. ಉದ್ಯಮಿಗಳು, ಹಣವುಳ್ಳವರೆಲ್ಲಾ ಬಂದು ಈ ಸ್ಥಾನದ ಮೇಲೆ ಕೂತು ಹೋಗಿದ್ದಾರೆ. ಅವರೇನು ಅಭಿವೃದ್ಧಿ ಕಾರ್ಯ ಮಾಡಿದರು ಎಂಬುದು ಯಾರಿಗಾದರೂ ಗೊತ್ತಾಗುತ್ತದೆಯೇ?
ವಿಷಯ ಅದಲ್ಲ. ಚರ್ಚಾರ್ಹ ಸಂಗತಿಯೆಂದರೆ, ಇಂಥದ್ದೊಂದು ಅಮೂಲ್ಯ ಸ್ಥಾನದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಈಗ ಹೊರಗಿನವರಿಗೆ ಟಿಕೆಟು ನೀಡಲಾಗುತ್ತಿದೆ. ಶೋಲೆ ಚಿತ್ರದಲ್ಲಿ ರಾಮಗಢದಲ್ಲಿ ಬಸಂತಿಯಾಗಿ ಕಾಣಿಸಿಕೊಂಡಿದ್ದು ಮತ್ತು ಕೆಲವೊಂದಿಷ್ಟು ನೃತ್ಯ ಪ್ರದರ್ಶನಗಳಲ್ಲೋ, ಚುನಾವಣಾ ಪ್ರಚಾರ ವೇದಿಕೆಗಳಲ್ಲೋ ನಟಿ ಹೇಮಾ ಮಾಲಿನಿ ಕರ್ನಾಟಕವನ್ನು ನೋಡಿದ್ದು ಬಿಟ್ಟರೆ, ರಾಜ್ಯಕ್ಕೂ, ಅವರಿಗೂ ಬೇರಾವುದೇ ಸಂಬಂಧಗಳಿದ್ದಂತಿಲ್ಲ.
ನೂರಾರು ಕನ್ನಡಿಗ ಶಾಸಕರಿರುವ, ಕೋಟ್ಯಂತರ ಕನ್ನಡಿಗ ಕಾರ್ಯಕರ್ತರಿರುವ ಬಿಜೆಪಿಗೆ ಆರು ಕೋಟಿ ಕನ್ನಡಿಗರಲ್ಲಿ ಒಬ್ಬನೇ ಒಬ್ಬ ಅಭ್ಯರ್ಥಿಯು ಕರ್ನಾಟಕದಿಂದ ಸಿಕ್ಕಿಲ್ಲ ಎಂಬುದು ಎಷ್ಟು ಖೇದಕರವೋ ಅಷ್ಟೇ ದುರಂತವೂ ಹೌದು.
ಬಿಜೆಪಿಗೂ ಹೈಕಮಾಂಡ್ ಸಂಸ್ಕೃತಿ ಬಂದಿದೆ. ರಾಜ್ಯದ ಮಾಜಿ ಸಂಸದ ಧನಂಜಯ ಕುಮಾರ್ ಅವರಿಗೆ ಈ ಸೀಟು ಕೊಡಿಸಬೇಕೆಂಬುದು ಮುಖ್ಯಮಂತ್ರಿ ಇಚ್ಛೆಯಾಗಿದ್ದರೆ, ಇಲ್ಲ, ಮಾಜಿ ಸಂಸದ ಕೋಳೂರು ಬಸವನಗೌಡರನ್ನು ಅಭ್ಯರ್ಥಿಯಾಗಿಸಿ ಎಂಬುದು ಬಳ್ಳಾರಿ ರೆಡ್ಡಿ ಸಹೋದರರ ಗುಟುರು. ಈ ಆಂತರಿಕ ಮೇಲಾಟದಿಂದಾಗಿಯೇ ಬಿಜೆಪಿ ಹೈಕಮಾಂಡ್, 'ಯಾರಿಗೂ ಬೇಡ' ಎನ್ನುತ್ತಾ ಚಿತ್ರನಟಿ ಹೇಮಮಾಲಿನಿಗೆ ಈ ಅವಕಾಶ ಕೊಟ್ಟಿತು ಎನ್ನಲಾಗುತ್ತಿದೆ. ಹೊರ ರಾಜ್ಯದ ವೆಂಕಯ್ಯ ನಾಯ್ಡು ಈಗಾಗಲೇ ರಾಜ್ಯಸಭೆಯಲ್ಲಿ ಕರ್ನಾಟಕದ ಋಣದಲ್ಲಿದ್ದಾರೆ. ರಾಜಶೇಖರ ಮೂರ್ತಿ ತೆರವು ಮಾಡಿದ ಈ ಸ್ಥಾನದ ಅಧಿಕಾರಾವಧಿ ಮುಂದಿನ ವರ್ಷದ ಏಪ್ರಿಲ್ 2ರವರೆಗಿದೆ.
ಅಷ್ಟಕ್ಕೂ ಈ ಆಕ್ಷೇಪಗಳೆಲ್ಲಾ ಎತ್ತೋದ್ಯಾಕೆ? 107 ಶಾಸಕ ಸದಸ್ಯ ಬಲವಿರುವುದರಿಂದ, ಕರ್ನಾಟಕದಲ್ಲಿ ನೆಲಸಿರದ, ರಾಜ್ಯದ ಮತದಾರರೂ ಅಲ್ಲದ, ಈಗ 63ರ ಹರೆಯದ ಹೇಮಮಾಲಿನಿಯವರೇನೋ ಜೆಡಿಎಸ್-ಕಾಂಗ್ರೆಸ್ ನಿಲ್ಲಿಸಿರುವ ಅಭ್ಯರ್ಥಿ ಸಾಹಿತಿ ಮರುಳಸಿದ್ಧಪ್ಪ ಅವರೆದುರು ಗೆಲ್ಲಬಹುದು.
ಇಂಥದ್ದೊಂದು ಪರಿಸ್ಥಿತಿಗೆ ವೇದಿಕೆ ಹಾಕಿಕೊಟ್ಟದ್ದು ಕೂಡ ಬೇರಾರೂ ಅಲ್ಲ, ಅಂದು ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವೇ. ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದು, ರಾಜ್ಯಸಭೆಗೆ ಯಾವ ರಾಜ್ಯದಿಂದಲಾದರೂ ಸ್ಪರ್ಧಿಸುವವರು ಆ ರಾಜ್ಯದ ಪ್ರಜೆಯಾಗಿರಬೇಕಿಲ್ಲ ಅಥವಾ ಅಲ್ಲಿನ ಮತದಾರರೂ ಆಗಿರಬೇಕಿಲ್ಲ ಎಂದಾಗಿಸಿತ್ತು. ಆದರೆ, ರಾಜ್ಯಸಭೆಯೋ, ಲೋಕಸಭೆಯೋ, ಆರಿಸಿ ಹೋದವರು ಮತ್ತೆ ತಿರುಗಿಯೂ ನೋಡುವುದಿಲ್ಲವಾದ್ದರಿಂದ ಯಾರಾದರೆ ನಮಗೇನು ಎಂಬುದು ನಿಮ್ಮ ಮನಸ್ಸಿನಲ್ಲಿ ಹೊಳೆಯಿತೇ? ಅದಕ್ಕೆ ನಾವು ಜವಾಬ್ದಾರರಲ್ಲ!