ಸೋವಿಯಟ್ ಒಕ್ಕೂಟ ಪತನಗೊಳ್ಳುವುದಕ್ಕೆ ಮುಂಚಿತವಾಗಿ ಕೊನೆಯ ಅಧ್ಯಕ್ಷರಾಗಿದ್ದ ಮೈಕೆಲ್ ಗೋರ್ಬಚೇವ್ ಈಗ ಗಾಯಕರಾಗಿ ಪರಿವರ್ತನೆಯಾಗಿದ್ದಾರೆ. ಬಿಳಿರಕ್ತಕಣಗಳ ಕಾಯಿಲೆಯಾದ ಲ್ಯುಕೇಮಿಯದಿಂದ 10 ವರ್ಷಗಳ ಕೆಳಗೆ ನಿಧನರಾಗಿದ್ದ ಪತ್ನಿ ರೈಸಾ ಅವರ ನೆನಪಿಗಾಗಿ ಪ್ರೇಮ ಗೀತೆಗಳ ಆಲ್ಬಮ್‌ನ್ನು ಗೋರ್ಬಚೇವ್ ಧ್ವನಿಮುದ್ರಿಸಿದ್ದಾರೆ.ರಷ್ಯಾದ ಪ್ರಖ್ಯಾತ ಪಾಪ್ ಹಾಡುಗಾರ ಅಂಡ್ರೈ ಮಕಾರೆವಿಕ್ ನೆರವಿನಿಂದ ಸಾಂಗ್ಸ್ ಫಾರ್ ರೈಸಾ ಸಿಡಿಯನ್ನು ಗೋರ್ಬಚೇವ್ ಧ್ವನಿಮುದ್ರಿಸಿಕೊಂಡಿದ್ದಾರೆ.
ರೈಸಾರ 7 ಅಚ್ಚುಮೆಚ್ಚಿನ ಪ್ರೇಮಗೀತೆಗಳು ಸಿಡಿಯಲ್ಲಿರುವುದಾಗಿ ಗೋರ್ಬಚೇವ್ ಹೇಳಿದ್ದಾರೆ. ತಾವು ಅದನ್ನು ಸ್ವತಃ ಹಾಡಿದ್ದು, ಲಂಡನ್ ಧರ್ಮದತ್ತಿ ಹರಾಜಿನಲ್ಲಿ ಸಿಡಿಯನ್ನು ಮಾರಾಟಕ್ಕೆ ಇಡಲಾಗುವುದು ಎಂದು ಅವರು ಹೇಳಿದ್ದಾಗಿ ಇಂಟರ್‌ಫ್ಯಾಕ್ಸ್ ವರದಿ ಮಾಡಿದೆ.
ಸಂಗೀತದ ಅಂಗಡಿಗಳಲ್ಲಿ ಸಾರ್ವಜನಿಕ ಮಾರಾಟಕ್ಕೆ ಸಿಡಿಗಳು ಲಭ್ಯವಿಲ್ಲವೆಂದು ಅವರು ಹೇಳಿದ್ದಾರೆ.999ರಲ್ಲಿ ರೈಸಾ ಗೊರ್ಬಚೇವಾ ಲುಕೇಮಿಯ ಕಾಯಿಲೆಗೆ ಬಲಿಯಾದರು. ಅವರ ಸ್ಮರಣಾರ್ಥ ಮಾಜಿ ಮುಖಂಡರು ಗೋರ್ಬಚೆವ್ ನಿಧಿಯನ್ನು ಸ್ಥಾಪಿಸಿದ್ದು, ಲುಕೇಮಿಯದಿಂದ ಬಳಲುವ ರಷ್ಯಾ ಮಕ್ಕಳಿಗೆ ನೆರವಾಗುವ ದತ್ತಿ ಪ್ರತಿಷ್ಠಾನವಾಗಿದೆ. |