ವಾಷಿಂಗ್ಟನ್, ಮಂಗಳವಾರ, 27 ಅಕ್ಟೋಬರ್ 2009( 17:48 IST )
ಹೈಸ್ಕೂಲ್‌ನಿಂದ ಮನೆಯತ್ತ ನಡೆದು ಬರುತ್ತಿದ್ದ 15ರ ಹರೆಯದ ಬಾಲಕಿಯನ್ನು ಹೊಡೆದು, ಸಾಮೂಹಿಕ ಅತ್ಯಾಚಾರ ಮಾಡುತ್ತಿದ್ದ ಘಟನೆಯನ್ನು ನೆರೆದಿದ್ದ ಸುಮಾರು 12ಕ್ಕೂ ಅಧಿಕ ಜನ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದ ಅಮಾನವೀಯ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಶಂಕಿತ ಇಬ್ಬರನ್ನು ಸೋಮವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಿಜ್‌ಮಂಡ್ ಹೈಸ್ಕೂಲ್‌ನಿಂದ ಶುಕ್ರವಾರ ರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ಗುಂಪೊಂದು ಅತ್ಯಾಚಾರ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನೆರೆದಿದ್ದ ಜನರ ಮಧ್ಯೆಯೇ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಹೊಡೆದು, ಆಕೆಯ ಆಭರಣಗಳನ್ನು ದೋಚಿದ್ದಾರೆ. ಆದರೆ ನೆರೆದಿದ್ದ ಜನರು ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲವಾಗಿತ್ತು ಎಂದು ಲೆಫ್ಟಿನೆಂಟ್ ಮಾರ್ಕ್ ಗಗನ್ ವಿವರಿಸಿದ್ದಾರೆ. ಘಟನೆ ಕಣ್ಣೆದುರು ನಡೆಯುತ್ತಿದ್ದರೂ ಕೂಡ ಜನರು ಏನು ನಡೆಯುತ್ತಿದೆ ಎಂದು ಕುತೂಹಲಿಗಳಾಗಿ ನೋಡಿದರೆ ವಿನಃ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದರು.
ಘಟನೆಯಲ್ಲಿ ಬಲಿಪಶುವಾಗಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಮ್ಯಾನ್ಯುಯೆಲ್ ಒರ್ಟೆಗಾ(19) ಎಂಬಾತನನ್ನು ಬಂಧಿಸಿಲಾಗಿದ್ದು, ಅತ್ಯಾಚಾರ ಮತ್ತು ದರೋಡೆ ಆರೋಪದ ಮೇಲೆ ಬಂಧಿತನಾಗಿರುವ ಆತನನ್ನು ನ್ಯಾಯಾಲಯ 800,000 ಪೌಂಡ್ ವೈಯಕ್ತಿಕ ಬಾಂಡ್‌ನೊಂದಿಗೆ ಜಾಮೀನು ನೀಡಲಾಗಿದೆ. ಬಂಧಿತ ಯುವಕ ವಿದ್ಯಾರ್ಥಿಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.