ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಎಂಬ ಆರೋಪ ಹೊತ್ತಿರುವ ಜಮಾತ್ ಉದ್ ದಾವಾ ವರಿಷ್ಠ ಹಫೀಜ್ ಮೊಹಮ್ಮದ್ ಸಯೀದ್ ಭಾನುವಾರ ಇಸ್ರೇಲ್ ವಿರುದ್ಧದ ಬೃಹತ್ ರಾಲಿಯನ್ನು ಉದ್ದೇಶಿಸಿ ಮಾತನಾಡಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಲಾಹೋರ್‌ನ ನಾಸೆರ್ ಬಾಗ್‌ನಲ್ಲಿ ನಡೆದ ರಾಲಿಯಲ್ಲಿ ಧಾರ್ಮಿಕ ಸಂಘಟನೆ, ಉದ್ಯಮಿಗಳು, ವಕೀಲರು, ವಿದ್ಯಾರ್ಥಿಗಳು ಸೇರಿದಂತೆ ಸುಮಾರು ಹತ್ತು ಸಾವಿರ ಮಂದಿ ಭಾಗವಹಿಸಿದ್ದ ಬೃಹತ್ ಸಭೆಯಲ್ಲಿ ಸಯೀದ್ ಪಾಲ್ಗೊಂಡಿದ್ದ.
ಗೃಹ ಬಂಧನದಲ್ಲಿದ್ದ ಹಫೀಜ್ ಸಯೀದ್‌ನನ್ನು ಲಾಹೋರ್ ಹೈಕೋರ್ಟ್ ಆದೇಶದ ಮೇರೆಗೆ ಬಂಧಮುಕ್ತಗೊಳಿಸಿದ ನಂತರ ಆತ ಎರಡನೇ ಬಾರಿಗೆ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿ ಮಾತನಾಡಿರುವುದಾಗಿ ವರದಿ ವಿವರಿಸಿದೆ. ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಫೀಜನನ್ನು ಆರು ತಿಂಗಳ ಕಾಲ ಗೃಹಬಂಧನದಲ್ಲಿ ಇರಿಸಲಾಗಿತ್ತು.
ಇಸ್ರೇಲ್ ಕೇವಲ ಗಾಜಾ ಪಟ್ಟಿ ಮೇಲೆ ಮಾತ್ರ ದಾಳಿ ಮಾಡುತ್ತಿಲ್ಲ, ಅದು ನೆರೆಯ ಪಾಕಿಸ್ತಾನದವರೆಗೂ ಮುಂದುವರಿಸಿರುವುದಾಗಿ ಹಫೀಜ್ ರಾಲಿಯಲ್ಲಿ ವಾಗ್ದಾಳಿ ನಡೆಸಿದ್ದು, ಇಸ್ರೇಲ್ ಗುಪ್ತಚರ ಸಂಸ್ಥೆ ಜಮ್ಮು-ಕಾಶ್ಮೀರದಲ್ಲಿಯೂ ತನ್ನ ಕಚೇರಿಯನ್ನು ತೆರೆದಿರುವುದಾಗಿ ಈ ಸಂದರ್ಭದಲ್ಲಿ ಗಂಭೀರವಾಗಿ ಆರೋಪಿಸಿದ್ದಾನೆ.
ಆ ನಿಟ್ಟಿನಲ್ಲಿ ಪಾಕಿಸ್ತಾನ ಬಾಹ್ಯ ಬೆದರಿಕೆಯನ್ನು ಎದುರಿಸುತ್ತಿರುವುದಾಗಿ ಹೇಳಿದ ಹಫೀಜ್, ಆದರೆ ಸಂಸತ್ ಮತ್ತು ನ್ಯಾಯಾಂಗ ಮಾತ್ರ ಒಂದೇ ತೆರನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದ್ದಾನೆ. ಆಡಳಿತಾರೂಢ ಪಾಕಿಸ್ತಾನ್ ಪೀಪಲ್ಸ್ ಪಕ್ಷ ಮತ್ತು ಸುಪ್ರೀಂಕೋರ್ಟ್ ಯಾವುದೇ ವ್ಯತ್ಯಾಸವಿಲ್ಲದಂತೆ ನಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ.