ಬಿಹಾರದ ಕುಸ್ರುಪುರ ಎಂಬಲ್ಲಿ ರೈಲುನಿಲುಗಡೆ ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನಡೆದಿರುವ ಹಿಂಸಾಚಾರದ ಪ್ರತಿಭಟನೆ ಹಾಗೂ ರೈಲುಗಳಿಗೆ ಬೆಂಕಿ ಪ್ರಕರಣದ ಹಿಂದೆ ಯಾವುದಾದರೂ ಸಂಚಿರಬಹುದು ಎಂಬುದಾಗಿ ಶಂಕಿಸಿರುವ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಈ ಕುರಿತು ಇಲಾಖಾ ತನಿಖೆಗೆ ಆದೇಶ ನೀಡಿದ್ದಾರೆ.
ಇದೀಗಾಗಲೇ ಇರುವ ನಿಗದಿಯಂತೆ ಬಿಹಾರದ ಕುಸ್ರುಪುರ ನಿಲ್ದಾಣದಲ್ಲಿ ರೈಲು ನಿಲುಗಡೆ ಮುಂದುವರಿಯಲಿದೆ ಎಂದು ಹೇಳಿರುವ ಮಮತಾ ಬ್ಯಾನರ್ಜಿ, ಇಂತಹ ಉದ್ರೇಕಕಾರಿ ಹಿಂಸಾಚಾರ ನಡೆಸುವಂತಹುದ್ದನ್ನೇನು ತಾನು ಮಾಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈ ರೈಲು ನಿಲ್ದಾಣದಲ್ಲಿ ಕೆಲವು ರೈಲುಗಳ ನಿಲುಗಡೆ ಹಿಂತೆಗೆತಕ್ಕೆ ತಾನು ಆದೇಶ ನೀಡಿಲ್ಲ ಎಂದೂ ಹೇಳಿದ್ದಾರೆ. ಕುಸ್ರುಪುರ ರೈಲು ನಿಲ್ದಾಣದಲ್ಲಿ ಕೆಲವು ರೈಲುಗಳ ನಿಲುಗಡೆಯನ್ನು ಹಿಂತೆಗೆಯಲಾಗಿದೆ ಎಂಬ ಪತ್ರಿಕಾ ಪ್ರಕಟಣೆಯನ್ನು ಕಂಡು ರೊಚ್ಚಿಗೆದ್ದಿದ್ದ ಸ್ಥಳೀಯರು ಸೋಮವಾರ ಇಲ್ಲಿ ಉಗ್ರ ಪ್ರತಿಭಟನೆ ನಡೆಸಿ ರೈಲು ನಿಲ್ದಾಣ ಹಾಗೂ ಎರಡು ರೈಲುಗಳಿಗೆ ಬೆಂಕಿ ಹಚ್ಚಿದ್ದರಲ್ಲದೆ, ರೈಲು ಹಳಿಗಳನ್ನು ಬುಡಮೇಲು ಮಾಡಿದ್ದರು.
"ನಾನು ಪಶ್ಚಿಮ ಬಂಗಾಳದವಳೆಂಬ ಕಾರಣಕ್ಕೆ ಇತರ ರಾಜ್ಯಗಳ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತೇನೆ ಎಂಬುದರಲ್ಲಿ ಅರ್ಥವಿಲ್ಲ. ನಾನಿಂತಹುದನ್ನು ಇಷ್ಟಪಡುವುದಿಲ್ಲ ಮತ್ತು ಇಂತಹ ಕಾರ್ಯಗಳನ್ನು ಎಂದಿಗೂ ಮಾಡಿಲ್ಲ. ಆದರೆ ನಮ್ಮನ್ನು ದೂಷಿಸಲು ಜನತೆ ಮಾಡಿರುವ ಕಾರ್ಯ ಸರಿಯಲ್ಲ. ಯಾರೋ ತಪ್ಪು ಮಾಹಿತಿ ನೀಡಿದ್ದಾರೆ, ಇಲ್ಲವೇ ವಿಷಯವನ್ನು ತಿರುತಿದ್ದಾರೆ ಮತ್ತು ಜನರನ್ನು ಉದ್ರೇಕಿಸಿದ್ದಾರೆ. ಇದಕ್ಕೆ ವೈಯಕ್ತಿಕ ಅಸೂಯೆ ಕಾರಣವಿರಬಹುದು" ಎಂಬುದಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದ್ದಾರೆ.
ಕುಸ್ರುಪುರದಲ್ಲಿ ರೈಲು ನಿಲುಗಡೆಯ ಹಿಂತೆಗೆತದ ಕುರಿತು ತಮ್ಮ ಸಚಿವಾಲಯಕ್ಕೆ ತಿಳಿದಿಲ್ಲ. ಇದಕ್ಕಾಗಿ ಇದನ್ನು ಯಾರು ಮತ್ತು ಯಾಕಾಗಿ ಮಾಡಿದ್ದಾರೆಂಬುದನ್ನು ತಿಳಿಯಲು ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ಹಿಂಸಾಚಾರದ ಪ್ರತಿಭಟನೆಗಳಿಗೆ ವದಂತಿಗಳು ಕಾರಣವಿದ್ದಂತೆ ತೋರುತ್ತದೆ. ಮತ್ತು ಇದಕ್ಕೆ ಬಿಹಾರ Vs ಬಂಗಾಳ ತಿರುವು ನೀಡಲಾಗಿದೆ. ಇದನ್ನು ಯಾರೇ ಆದರೂ, ಯಾರದದ್ದಾರೂ ನಿಷ್ಠೆಗಾಗಿ ಮಾಡಿದ್ದರೆ, ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ನುಡಿದರು. |