ಕನ್ನಡ ನಾಡು-ನುಡಿ-ಭಾಷೆ ರಕ್ಷಣೆಗೆ ರಾಜ್ಯದ ಸಂಸದರು ಒಟ್ಟಾಗಿ ದುಡಿಯಬೇಕು, ಅಲ್ಲದೇ ಈ ಬಾರಿ ಆಯ್ಕೆಯಾದ ಪ್ರತಿಯೊಬ್ಬ ಸಂಸದರು ಕನ್ನಡದಲ್ಲೇ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು ಅಂತ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕರ್ನಾಟಕ ರಕ್ಷಣಾ ವೇದಿಕೆ ನೀಡಿರುವ ಸಲಹೆಗೆ ಪೂರಕ ಎಂಬಂತೆ ರಾಜ್ಯದ ಬಹುತೇಕ ಸಂಸದರು ಸೋಮವಾರ ಸಂಸತ್‌ನಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಕನ್ನಡತನವನ್ನು ಮೆರೆದರು. ಆ ನಿಟ್ಟಿನಲ್ಲಿ ಇಂದು ಸಂಸತ್‌ನಲ್ಲಿ ಕರ್ನಾಟಕದ ಸಂಸದರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಧರಂಸಿಂಗ್, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಅನಂತ್ ಕುಮಾರ್, ಡಿ.ಬಿ.ಚಂದ್ರೇಗೌಡ, ಸುರೇಶ್ ಅಂಗಡಿ, ಪಿ.ಸಿ.ಮೋಹನ್, ಸಣ್ಣ ಫಕೀರಪ್ಪ, ಪಿ.ಸಿ.ಗದ್ದೀಗೌಡರ್, ರಮೇಶ್ ಜಿಗಜಿಣಗಿ, ಶಿವರಾಮಗೌಡ, ಜೆ.ಶಾಂತಾ, ಶಿವಕುಮಾರ್ ಉದಾಸಿ, ಪ್ರಹ್ಲಾದ್ ಜೋಷಿ, ಜಿ.ಎಂ.ಸಿದ್ದೇಶ್ವರ್, ಬಿ.ವೈ.ರಾಘವೇಂದ್ರ, ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಜನಾರ್ದನ ಸ್ವಾಮಿ, ಜಿ.ಎಸ್.ಬಸವರಾಜ್, ಹೆಚ್.ವಿಶ್ವನಾಥ್, ಆರ್.ಧ್ರುವನಾರಾಯಣ್ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ, ಅನಂತ್ ಕುಮಾರ್, ಖರ್ಗೆ ಸೇರಿದಂತೆ ಹೆಚ್ಚಿನವರು ದೇವರ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಆದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ತಂದೆ-ತಾಯಿ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನಳಿನ್ ಕುಮಾರ್ ಕಟೀಲ್, ಕಟೀಲು ದುರ್ಗಾಪರಮೇಶ್ವರಿ ಮತ್ತು ಮಹಾಲಿಂಗೇಶ್ವರ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಮೊಯಿಲಿ-ಮುನಿಯಪ್ಪ ಇಂಗ್ಲಿಷ್‌ಗೆ ಮೊರೆ: ಕರ್ನಾಟಕದ ಇಬ್ಬರು ಪ್ರಮುಖ ಸಂಸದರು, ಕೇಂದ್ರ ಸಚಿವರಾಗಿರುವ ಎಂ.ವೀರಪ್ಪ ಮೊಯ್ಲಿ ಹಾಗೂ ಕೆ.ಎಚ್.ಮುನಿಯಪ್ಪ ಅವರು ಮಾತ್ರ ಮಾತೃಭಾಷೆಯನ್ನು ಬಿಟ್ಟು ಇಂಗ್ಲಿಷ್‌ನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು.' ನಮಗೆಲ್ಲ ತುಂಬಾ ಹೆಮ್ಮೆ ಎನಿಸಿಸುತ್ತದೆ, ನಾವೆಲ್ಲರೂ ಕನ್ನಡದಲ್ಲೇ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಉಡುಪಿ-ಚಿಕ್ಕಮಗಳೂರು ಸಂಸದ ಡಿ.ವಿ.ಸದಾನಂದ ಗೌಡ ಇತ್ತೀಚೆಗಷ್ಟೇ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರು ಅವರು ನೀಡಿರುವ ಸಲಹೆ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ವಿವರಣೆ ಡಿವಿಯವರದ್ದು. ಕನ್ನಡದಲ್ಲಿಯೇ ಪ್ರತಿಜ್ಞಾ ವಿಧಿ ಸ್ವೀಕರಿಸಲು ಯಾವ ಸಂಸದರಿಗೂ ಯಾವುದೇ ಕೀಳರಿಮೆ ಇಲ್ಲ, ನಿಜಕ್ಕೂ ಕನ್ನಡದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲು ಹೆಮ್ಮೆ ಎನಿಸಿಸುತ್ತದೆ ಎಂದು ಹಾವೇರಿ ಸಂಸದ ಶಿವಕುಮಾರ್ ಉದಾಸಿ ತಿಳಿಸಿದ್ದರು. ಅದರಂತೆ ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಕರ್ನಾಟಕದ ಸಂಸದರು ಲೋಕಸಭೆಯಲ್ಲಿ ಕನ್ನಡ ಡಿಂಡಿಮವನ್ನು ಮೊಳಗಿಸಿದರು. |