ನೂತನ ಲೋಕಸಭೆಯು ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ 'ಹೊಸ ಅಭ್ಯುದಯ'ವಾಗಲಿದೆ ಎಂದು ಹೇಳಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಸತ್ತಿನ ಸುಲಲಿತ ಕಾರ್ಯಾಚರಣೆಗೆ ಅನುವು ನೀಡಬಹುದೆಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ.
"ನಾವು ಹೊಸ ಆರಂಭವನ್ನು ಮಾಡಲಿದ್ದೇವೆ ಎಂಬುದಾಗಿ ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಸಂಸತ್ತಿನ ಪ್ರಕ್ರೆಯೆಗಳು ಸುಲಲಿತವಾಗಿ ನಡೆಯಲು ಅವಕಾಶ ಲಭಿಸಬಹುದು ಎಂಬ ಆಶಾಭಾವನೆಯನ್ನು ನಾನು ಹೊಂದಿದ್ದೇನೆ ಮತ್ತು ನಾವು ವಿರೋಧ ಪಕ್ಷಗಳನ್ನು ಗೌರವಿಸುತ್ತೇವೆ ಹಾಗೂ ಅವರ ಜವಾಬ್ದಾರಿಗಳನ್ನು ನಿರ್ವಹಿಸಲು ಅನುಕೂಲ ಕಲ್ಪಿಸುತ್ತೇವೆ" ಎಂದು ಸಂಸತ್ತನ್ನು ಪ್ರವೇಶಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಸಿಂಗ್ ಹೇಳಿದರು.
ಹಿರಿಯ ಲೋಕಸಭಾ ಸದಸ್ಯ ಮಾಣಿಕ್‌ರಾವ್ ಗಾವಿತ್ ಅವರನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಹಂಗಾಮಿ ಸಭಾಪತಿಯಾಗಿ ನೇಮಿಸಿದ್ದಾರೆ. ಸ್ಪೀಕರ್ ನೇಮಕವಾಗುವ ತನಕ ಅವರು ಸಂಸತ್ತಿನ ಪ್ರಕ್ರಿಯೆಯನ್ನು ನಡೆಸಲಿದ್ದಾರೆ.
ರಾಷ್ಟ್ರಪತಿ ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಪುಟ್ಟ ಸಮಾರಂಭದಲ್ಲಿ ಗಾವಿತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಡಾ| ಮನಮೋಹನ್ ಸಿಂಗ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ. ಬನ್ಸಾಲ್ ಹಾಗೂ ಮತ್ತಿತರರು ಭಾಗವಹಿಸಿದ್ದರು.
ಸಂಸತ್ತಿನಲ್ಲಿ ಪ್ರಥಮವಾಗಿ ಲೋಕಸಭಾ ನಾಯಕ ಪ್ರಣಬ್ ಮುಖರ್ಜಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ಇವರಾದ ಬಳಿಕ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದರು. |