ಬಿಹಾರದ ಕುಸ್ರುರ್‌ಪುರ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ಹಲವು ರೈಲಗಳ ನಿಲುಗಡೆಯನ್ನು ಹಿಂತೆಗೆದುಕೊಂಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಪಾಟ್ನ ಸಮೀಪ ಎರಡು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ.
ಪಾಟ್ನದಿಂದ 32 ಕಿಲೋಮೀಟರ್ ದೂರದಲ್ಲಿರುವ ಧನಾಪುರ ವಿಭಾಗದ ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ರೈಲ್ವೇ ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದಾರೆ. ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದರಲ್ಲದೆ, ರೈಲ್ವೇ ಹಳಿಗಳನ್ನು ಬುಡಮೇಲು ಮಾಡಿದ್ದಾರೆ.
ಫತುವ ನಿಲ್ದಾಣದಲ್ಲಿ ದನಾಪುರ-ದರ್ಬಾಂಗ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಹವಾನಿಯಂತ್ರಿತ ಕೋಚ್‌ಗೆ ಬೆಂಕಿ ಹಚ್ಚಲಾಗಿದೆ. ನೂತನ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅವರು ದೆಹಲಿ-ಪಾಟ್ನಾ ನಡುವೆ ಓಡಾಡುವ ಶ್ರಮಜೀವಿ ಎಕ್ಸ್‌ಪ್ರೆಸ್ ರೈಲಿಗೆ ಪಾಟ್ನ ಸಮೀಪದ ಇತರ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ ಎಂಬುದಾಗಿ ಆದೇಶ ನೀಡಿರುವುದು ಜನತೆ ರೊಚ್ಚಿಗೇಳಲು ಕಾರಣ.
"ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಮತ್ತು ಬೆಂಕಿ ನಂದಿಸಲಾಗಿದೆ. ಎಸಿ ಕೋಚ್ ಅರೆವಾಸಿ ಸುಟ್ಟುಹೋಗಿದೆ" ಎಂಬುದಾಗಿ ರೈಲ್ವೇಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಕೆ. ಚಂದ್ರ ಹೇಳಿದ್ದಾರೆ.
ಪ್ರತಿಭಟನೆಯಿಂದಾಗಿ ಹಲವಾರು ರೈಲುಗಳ ಓಟಾಟ ಸ್ಥಗಿತಗೊಂಡಿದ್ದು ಸಾವಿರಾರು ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ. ಪ್ರತಿಭಟನಾಕಾರರು ರೈಲು ಹಳಿಗಳ ಮೇಲೆಯೇ ಕುಳಿತಿದ್ದಾರೆ ಎಂದು ವರದಿಗಳು ಹೇಳಿವೆ.
ಕುಸ್ರುರ್‌ಪುರದಲ್ಲಿ ರೈಲು ನಿಲುಗಡೆಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂಬ ಪೂರ್ವ ಕೇಂದ್ರೀಯ ರೈಲ್ವೇಯ ಪ್ರಕಟಣೆಯನ್ನು ಪತ್ರಿಕೆಗಳಲ್ಲಿ ಓದಿದ ಜನತೆ ಪ್ರತಿಭಟನೆಗಿಳಿದಿದ್ದಾರೆ.
|