ಹದಿನೈದನೇ ಲೋಕಸಭೆಯ ಅತ್ಯಂತ ಕಿರಿಯ ಸಂಸದನಾಗಿರುವ ಹಮದುಲ್ಲಾ ಸಯೀದ್ ಅವರ ಸ್ಫರ್ಧೆಗೆ ಅನುಕೂಲವಾಗುವಂತೆ ಕಾನೂನಿಗೆ ತಿದ್ದುಪಡಿ ತರಲಾಗಿದೆ.
ಹಮದುಲ್ಲ ಸಹ ವಂಶಪಾರಂಪರ್ಯ ರಾಜಕಾರಣದ ಒಂದು ಭಾಗ. 27ರ ಹರೆಯದ ಇವರು ಮಾಜಿ ಕೇಂದ್ರ ಸಚಿವ ದಿವಂಗತ ಪಿ.ಎಂ. ಸಯೀದ್ ಅವರ ಪುತ್ರ. ಅವರು ಅತ್ಯಂತ ಪುಟ್ಟ ಕ್ಷೇತ್ರವಾಗಿರುವ ಲಕ್ಷದ್ವೀಪದಿಂದ ಆರಿಸಿ ಬಂದಿದ್ದಾರೆ. 2001ರ ಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ 60,595.
ಕಾನೂನು ಪ್ರಕಾರ ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದಲ್ಲಿ ಸ್ಫರ್ಧಿಸಬೇಕಿದ್ದರೆ ಅವರು ಅಲ್ಲೇ ಜನಿಸಿದವರಾಗಿರಬೇಕು. ಆದರೆ ಹಮದುಲ್ಲ ಕರ್ನಾಟಕದಲ್ಲಿ ಜನಿಸಿ, ನವದೆಹಲಿಯಲ್ಲಿ ಬೆಳೆದವರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರತಿಸ್ಥಾನವೂ ಪ್ರಾಮುಖ್ಯವೇ ಎಂಬುದಾಗಿ ಅಂದೇ ಲೆಕ್ಕಹಾಕಿದ್ದ ಮನಮೋಹನ್ ಸಿಂಗ್ ಸರ್ಕಾರವು 2008ರ ಡಿಸೆಂಬರ್‌ನಲ್ಲಿ ಈ ವಿಶೇಷ ಕಾಯ್ದೆಗೆ ತಿದ್ದುಪಡಿ ತಂದಿತ್ತು.
ಇದರಿಂದಾಗಿ 2005ರಲ್ಲಿ ಮೃತರಾದ ತನ್ನ ತಂದೆಯ ಉತ್ತರಾಧಿಕಾರಿಯಾಗಿ ಚುನಾವಣೆಯಲ್ಲಿ ಸ್ಫರ್ಧಿಸಲು ಹಮದುಲ್ಲ ಹಾದಿ ಸುಗಮವಾಗಿತ್ತು. ಅಭ್ಯರ್ಥಿಯು ಲಕ್ಷದ್ವೀಪದಲ್ಲೇ ಜನಿಸಬೇಕು ಎಂಬ ಕಾನೂನಿಗೆ ತಿದ್ದುಪಡಿ ತಂದು ಅಭ್ಯರ್ಥಿಯ ಹೆತ್ತವರಿಬ್ಬರು ಅಲ್ಲಿ ಜನಿಸಿದರೆ ಸಾಕು ಎಂದಾಗಿಸಿತ್ತು.
ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಫರ್ಧಿಸಿ ಗೆದ್ದು ಬಂದಿರುವ ಹಮದುಲ್ಲಾ ಪ್ರಸಕ್ತ ಲೋಕಸಭೆಯ ಅತ್ಯಂತ ಕಿರಿಯ ಸಂಸದ. |