ಒಂದೊಮ್ಮೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ತನ್ನ ಮೈತ್ರಿಯನ್ನು ಮುಂದುವರಿಸಲು ಇಷ್ಟಪಡದಿದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಫರ್ಧಿಸಲು ಸನ್ನದ್ಧರಾಗಿರಿ ಎಂಬುದಾಗಿ ಎನ್‌ಸಿಪಿ ವರಿಷ್ಠ ಶರದ್ ಪವಾರ್ ತನ್ನ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಎನ್‌ಸಿಪಿಗಳು ಪ್ರತ್ಯೇಕವಾಗಿ ಸ್ಫರ್ಧಿಸಿದರೆ ಶಿವಸೇನಾ ಮೈತ್ರಿಗೆ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಬುಧವಾರ ಪಕ್ಷದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ನಮ್ಮ ಇಚ್ಛೆ. ಆದರೆ ಇದು ಎನ್‌ಸಿಪಿಯ ಮಾತ್ರ ಇಚ್ಛೆ ಆಗಿರಬಾರದು" ಎಂದು ನುಡಿದರು.
ಕಾಂಗ್ರೆಸ್‌ನೊಂದಿಗಿನ ಮೈತ್ರಿಯು ವಿಫಲವಾದರೆ, 288 ಸ್ಥಾನಗಳಲ್ಲಿ ಸ್ಫರ್ಧಿಸಲು ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದು ಶರದ್ ಪವಾರ್ ನುಡಿದರು. ಮುಂಬರುವ ಮೂರು ತಿಂಗಳಲ್ಲಿ ಅಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಇತ್ತೀಚಿನ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟವು ಶೇ.39ರಶಷ್ಟು ಮತಗಳನ್ನು ಗಳಿಸಿದ್ದರೆ ಶಿವಸೇನಾ-ಬಿಜೆಪಿ ಮೈತ್ರಿ ಕೂಟವು ಶೇ36ರಷ್ಟು ಮತಗಳಿಸಿದೆ. ಎರಡು ಮೈತ್ರಿಕೂಟಗಳ ನಡುವಿನ ವ್ಯತ್ಯಾಸ ಕೇವಲ ಶೇ.ಮೂರು ಮಾತ್ರ. ನಾವು ಪ್ರತ್ಯೇಕವಾಗಿ ಸ್ಫರ್ಧಿಸಿದರೆ ಕೇಸರಿ ಪಡೆಯು ಇದರ ಅನುಕೂಲ ಪಡೆಯಲಿದೆ ಎಂದು ಪವಾರ್ ನುಡಿದರು. |