ಮೊಹಮ್ಮದ್ ಅಲಿ ಜಿನ್ನಾ ಕುರಿತ ತನ್ನ ಪುಸ್ತಕವನ್ನು ಗುಜರಾತ್ ಸರ್ಕಾರ ನಿಷೇಧಿಸಿರುವ ಕ್ರಮವನ್ನು ಪ್ರಶ್ನಿಸಿ ಪುಸ್ತಕದ ಲೇಖಕ ಜಸ್ವಂತ್ ಸಿನ್ಹಾ ಅವರು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ದೂರಿನಾಧಾರದಲ್ಲಿ ಸುಪ್ರೀಂಕೋರ್ಟ್ ಮಂಗಳವಾರ ಗುಜರಾತ್ ಸರ್ಕಾರಕ್ಕೆ ನೋಟೀಸ್ ನೀಡಿದೆ.
ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್ ಮತ್ತು ಸಿರಿಯಾಕ್ ಜೋಸೆಫ್ ಅವರುಗಳನ್ನೊಳಗೊಂಡ ನ್ಯಾಯಪೀಠವು ಗುಜರಾತ್ ಸರ್ಕಾರಕ್ಕೆ ನೋಟೀಸ್ ನೀಡಿದೆ. ಈ ಕುರಿತು ಸೂಚನೆಗಳನ್ನು ಪಡೆಯಲು ರಾಜ್ಯ ಸರ್ಕಾರದ ಪ್ರತಿನಿಧಿಗೆ ನ್ಯಾಯಪೀಠ ನಿರ್ದೇಶನ ನೀಡಿದ್ದು ಪ್ರಕರಣದ ಮುಂದಿನ ವಿಚಾರಣೆಗೆ ಸೆ.8ರಂದು ದಿನನಿಗದಿ ಮಾಡಿದೆ.
ಹಿರಿಯ ನ್ಯಾಯವಾದಿಗಳಾದ ಫಾಲಿ ಎಸ್. ನರಿಮನ್ ಮತ್ತು ಸೋಲಿ ಸ್ವರಾಬ್ಜಿ ಅವರುಗಳು ಜಸ್ವಂತ್ ಸಿಂಗ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ಪುಸ್ತಕ ನಿಷೇಧವು ಲೇಖಕ ಹಾಗೂ ಪ್ರಕಾಶಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರ ವಾದಿಸಿದರು.
ಪಾಕಿಸ್ತಾನದ ಸಂಸ್ಥಾಪಕ ಜಿನ್ನಾ ಕುರಿತ ಪುಸ್ತಕವನ್ನು, ಗುಜರಾತ್ ಸರ್ಕಾರವು ಪುಸ್ತಕ ಬಿಡುಗಡೆಗೊಂಡ ಎರಡು ದಿನದ ಬಳಿಕ ಆಗಸ್ಟ್ 19ರಂದು ನಿಷೇಧಿಸಿತ್ತು. ಪುಸ್ತಕದಲ್ಲಿನ ವಿಚಾರಗಳು ಸಾರ್ವಜನಿಕ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ವಿರೋಧವಾಗಿದೆ ಎಂಬ ಆರೋಪದೊಂದಿಗೆ ಪುಸ್ತಕವನ್ನು ಗುಜರಾತಿನಲ್ಲಿ ನಿಷೇಧಿಸಲಾಗಿದೆ.